ಏಕಲವ್ಯನ ಗುರುದಕ್ಷಿಣೆ
ಗುರುದಕ್ಷಿಣೆಯಲ್ಲಿ ಬೆರಳನ್ನು ನೀಡುವ ಏಕಲವ್ಯ
ಏಕಲವ್ಯನು ಗುರು ದ್ರೋಣಾಚಾರ್ಯರ ಬಳಿ ಹೋಗಿ 'ಗುರುದೇವ, ನನಗೆ ಧನುರ್ವಿದ್ಯೆಯನ್ನು ಕಲಿಸುವ ಕೃಪೆ ಮಾಡುವಿರೇ ?' ಎಂದು ಕೇಳಿದನು.
ಗುರು ದ್ರೋಣಾಚಾರ್ಯರ ಎದುರು ಧರ್ಮಸಂಕಟ ಬಂದೆರಗಿತ್ತು; ಏಕೆಂದರೆ ಅವರು ಪಿತಾಮಹ ಭೀಷ್ಮರಿಗೆ 'ಈ ವಿದ್ಯೆಯನ್ನು ಕೇವಲ ರಾಜಕುಮಾರರಿಗೇ ಕಲಿಸುತ್ತೇನೆ' ಎಂದು ವಚನ ನೀಡಿದ್ದರು. ಏಕಲವ್ಯನು ರಾಜಕುಮಾರನಾಗಿರಲಿಲ್ಲ, ಆದುದರಿಂದ ಅವನಿಗೆ ಈ ವಿದ್ಯೆಯನ್ನು ಕಲಿಸುವುದಾದರೂ ಹೇಗೆ? ದ್ರೋಣಾಚಾರ್ಯರು ಏಕಲವ್ಯನಿಗೆ 'ನಾನು ನಿನಗೆ ಈ ವಿದ್ಯೆಯನ್ನು ನೀಡಲಾರೆ' ಎಂದು ಹೇಳಿದರು.
ಹತಾಶಗೊಂಡ ಏಕಲವ್ಯನು ಮನೆಗೆ ಹಿಂದಿರುಗಿದನು. ಆದರೆ ನಂತರ ಗುರು ದ್ರೋಣಾಚಾರ್ಯರ ಒಂದು ಪ್ರತಿಮೆಯನ್ನು ನಿಲ್ಲಿಸಿ, ಅದರ ಮುಂದೆ ತಲೆ ಬಾಗಿ 'ಈ ಪ್ರತಿಮೆಯೇ ನನಗೆ ಗುರುವಾಗಲಿ' ಎಂದು ಹೇಳಿ ಧನುರ್ವಿದ್ಯೆಯನ್ನು ಕಲಿಯಲು ಪ್ರಾರಂಭಿಸಿದನು. ಹಂತ ಹಂತವಾಗಿ ಅವನ ಕೌಶಲ್ಯದಲ್ಲಿ ವೃದ್ಧಿಯಾಯಿತು.
ಒಮ್ಮೆ ದ್ರೋಣಾಚಾರ್ಯರು, ಪಾಂಡವರು ಹಾಗೂ ಕೌರವರು ಧನುರ್ವಿದ್ಯೆಯ ಅಭ್ಯಾಸಕ್ಕಾಗಿ ಒಂದು ಕಾಡಿಗೆ ಹೋದರು. ಅವರೊಂದಿಗೆ ಒಂದು ನಾಯಿಯೂ ಇತ್ತು. ಅದು ತಿರುಗಾಡುತ್ತ ಸ್ವಲ್ಪ ಮುಂದೆ ಹೋಗಿ ಏಕಲವ್ಯನ ಬಳಿ ತಲುಪಿತು. ನಾಯಿಯು ಅವನನ್ನು ನೋಡಿ ಬೊಗಳಲಾರಂಭಿಸಿತು.
ಏಕಲವ್ಯನು ನಾಯಿಗೆ ತಾಗಬಾದರು ಆದರೆ ಅದು ಬೊಗಳುವುದು ನಿಲ್ಲಬೇಕು ಎಂದು ಏಳು ಬಾಣಗಳನ್ನು ಆ ನಾಯಿಯ ಬಾಯಿಗೆ ಹೊಡೆದನು. ನಾಯಿಯು ಪುನಃ ಗುರು ದ್ರೋಣಾಚಾರ್ಯರು, ಪಾಂಡವರು ಹಾಗೂ ಕೌರವರಿರುವಲ್ಲಿಗೆ ಹೋಯಿತು.
ಗುರು ದ್ರೋಣಾಚಾರ್ಯರು 'ಅರ್ಜುನನ ತರಹದ ಧನುರ್ಧರನು ಬೇರೆಲ್ಲಿಯೂ ಇರಲಾರ' ಎಂದು ವಚನ ನೀಡಿದ್ದರು; ಆದರೆ ಇಲ್ಲಿ ಇನ್ನೂ ಹೆಚ್ಚು ನಿಪುಣ ಧನುರ್ಧರನಿದ್ದನು. ಗುರುಗಳ ಎದುರು ಧರ್ಮಸಂಕಟ ಎದುರಾಯಿತು. ಏಕಲವ್ಯನನ್ನು ಉದ್ದೇಶಿಸಿ, 'ನಿನಗೆ ಧನುರ್ವಿದ್ಯೆಯನ್ನು ನೀಡಿದವರು ಯಾರು?' ಎಂದು ಪ್ರಶ್ನಿಸಲು, ಏಕಲವ್ಯನು ಸಮೀಪದಲ್ಲೇ ಇದ್ದ ಪ್ರತಿಮೆಯನ್ನು ತೋರಿಸಿ 'ನೀವೇ ನನಗೆ ಗುರು' ಎಂದು ಹೇಳಿದನು. ಏಕಲವ್ಯನ ದೃಢ ಶೃದ್ಧೆಯನ್ನು ನೋಡಿ ಗುರುದೇವರು 'ನನ್ನ ಮೂರ್ತಿಯ ಎದುರು ಕುಳಿತು ನೀನು ಧನುರ್ವಿದ್ಯೆಯನ್ನು ಕಲಿತೆ ಎಂದು ನೀನು ಹೇಳಿದೆ, ಅದರೆ ಗುರುದಕ್ಷಿಣೆಯನ್ನು ಕೊಡಲಿಲ್ಲ' ಎಂದು ಕೇಳಿದರು.
ಏಕಲವ್ಯ : ನೀವು ಕೇಳಿದ ಗುರುದಕ್ಷಿಣೆಯನ್ನು ಕೊಡುತ್ತೇನೆ.
ಗುರು ದ್ರೋಣಾಚಾರ್ಯರು : ನಿನ್ನ ಬಲಗೈಯ ಹೆಬ್ಬೆರಳನ್ನು ಕೊಡು!
ಏಕಲವ್ಯನು ತಕ್ಷಣ ಒಂದು ಕ್ಷಣವೂ ವಿಚಾರ ಮಾಡದೇ ತನ್ನ ಬಲಗೈಯ ಹೆಬ್ಬೆರಳನ್ನು ಕತ್ತರಿಸಿ ಗುರುದೇವರ ಚರಣಗಳಿಗೆ ಅರ್ಪಿಸಿದನು.
ಗುರು ದ್ರೋಣಾಚಾರ್ಯರು : ಮಗು ! ಅರ್ಜುನನಿಗೆ ವಚನ ನೀಡಿದ್ದರಿಂದ ಅವನು ಧನುರ್ವಿದ್ಯೆಯಲ್ಲಿ ಸರ್ವಶ್ರೇಷ್ಠನಿದ್ದಾನೆ, ಆದರೂ ಏಲ್ಲಿಯ ವರೆಗೆ ಆಕಾಶದಲ್ಲಿ ಸೂರ್ಯ, ಚಂದ್ರ, ನಕ್ಷತ್ರಗಳಿವೆಯೋ ಅಲ್ಲಿಯ ವರೆಗೆ ಜನರು ನಿನ್ನ ಗುರುನಿಷ್ಠೆ ಹಾಗೂ ಗುರುಭಕ್ತಿಯನ್ನು ಸ್ಮರಿಸುವರು ಹಾಗೂ ನಿನ್ನ ಯಶೋಗಾಥೆಯನ್ನು ಹಾಡುವರು !
ಶಿಷ್ಯನನ್ನು ಸಾಧನೆಯಲ್ಲಿ ಮುಂದೆ ಕೊಂಡೊಯ್ಯುವ ಗುರುಗಳ ತಳಮಳ !
ರಾಮನೆಂಬ ಶಿಷ್ಯನು ಗುರುಗಳು ನೀಡಿದ ಎಲ್ಲ ಸೇವೆಯನ್ನು ನಮೃತೆಯಿಂದ ಹಾಗೂ ಸೇವಾಭಾವದಿಂದ ಆಜ್ಞಾಪಾಲನೆ ಎಂದು ಮಾಡುತ್ತಿದ್ದನು. ಆದುದರಿಂದ ಗುರುಗಳು ರಾಮನನ್ನು ತನ್ನ ಉತ್ತರಾಧಿಕಾರಿ ಎಂದು ನೇಮಿಸುತ್ತಾರೆ. ಎಂದಿನಂತೆಯೇ ಅವನು ಈ ಹೊಸ ಸೇವೆಯನ್ನೂ ತಳಮಳ ಹಾಗೂ ಸೇವಾಭಾವದಿಂದ ಮಾಡುತ್ತಿದ್ದನು.
ಸ್ವಲ್ಪ ಸಮಯದ ನಂತರ ಸೋಮ ಎಂಬ ಕುಶಾಗ್ರ ಬುದ್ಧಿಯ ಯುವಕನು ಗುರುಗಳ ಶಿಷ್ಯತ್ವವನ್ನು ಸ್ವೀಕರಿಸುತ್ತಾನೆ ಹಾಗೂ ಅಲ್ಪ ಕಾಲಾವಧಿಯಲ್ಲಿಯೇ ಅವನು ಗುರುಗಳ ಮನಸ್ಸನನ್ನು ಗೆಲ್ಲುತ್ತಾನೆ. ಅವನ ಬುದ್ಧಿಗೆ ಚಾಲನೆ ಸಿಗಬೇಕೆಂದು ಗುರುಗಳು ಉತ್ತರಾಧಿಕಾರಿ ಪದವಿಯಲ್ಲಿರುವ ರಾಮನಿಗೆ ಅಡುಗೆ ಮನೆಯ ಸೇವೆಯ ಜವಾಬ್ದಾರಿಯನ್ನು ನೀಡುತ್ತಾರೆ ಹಾಗೂ ಸೋಮನನ್ನು ತಮ್ಮ ಉತ್ತರಾಧಿಕಾರಿಯಾಗಿ ನೇಮಿಸುತ್ತಾರೆ. ಆದರೂ ರಾಮನ ಮನಸ್ಸಿನಲ್ಲಿ ಯಾವುದೇ ವಿಕಲ್ಪ ಬರದೇ ಅವನು ಗುರುಗಳಿಗೆ ಇಷ್ಟವಾಗುವಂತೆ ನೀಡಿದ ಸೇವೆಯನ್ನು ಮಾಡುತ್ತಿರುತ್ತಾನೆ.
ಕೆಲವು ದಿನಗಳ ನಂತರ ಸೋಮನ ಅಹಂಕಾರ ಹೆಚ್ಚುತ್ತದೆ. ಇದರಿಂದಾಗಿ ಸಹಸಾಧಕರು ಅವನ ಬದಲಾಗಿ ಅಡುಗೆ ಮನೆಯಲ್ಲಿ ಸೇವೆ ಮಾಡುವ ರಾಮನಿಂದ ಸಂದೇಹ ನಿವಾರಣೆಯನ್ನು ಮಾಡಿಕೊಳ್ಳತೊಡಗಿದರು. ಅದನ್ನು ನೋಡಿ ಸೋಮನ ಮನಸ್ಸಿನಲ್ಲಿ ರಾಮನ ಬಗ್ಗೆ ದ್ವೇಷಭಾವನೆ ನಿರ್ಮಾಣವಾಗುತ್ತದೆ.
ಒಂದು ದಿನ ಸೋಮ ಗುರುಗಳ ಬಳಿ ಹೋಗಿ ತನ್ನ ದ್ವೇಷಭಾವನೆಯನ್ನು ವ್ಯಕ್ತಪಡಿಸುತ್ತಾನೆ. ಆಗ ಗುರುಗಳು 'ರಾಮನ ಉತ್ತರಾಧಿಕಾರಿ ಪದವಿಯನ್ನು ತೆಗೆದು ನಿನಗೆ ಕೊಟ್ಟೆ; ಏಕೆಂದರೆ ನನಗೆ ಇದರಿಂದ ಯಾವುದೇ ಸೇವೆ ಮಾಡಿದರೂ ಗುರುಗಳ ಆಜ್ಞೆಯನ್ನು ಶಿರಸಾವಹಿಸಿ ಪಾಲಿಸಿ ಭಾವಪೂರ್ಣವಾಗಿ ಸೇವೆ ಮಾಡುತ್ತಾರೆಯೋ ಅವರೇ ನಿಜವಾದ ಅರ್ಥದಲ್ಲಿ ಗುರುಗಳ ಮನಸ್ಸನ್ನು ಗೆಲ್ಲಬಲ್ಲರು ಎಂಬುದನ್ನು ನಿನಗೆ ಕಲಿಸಬೇಕಿತ್ತು. ಇಂದಿನಿಂದ ನೀನು ಅಡುಗೆ ಮನೆಯಲ್ಲಿ ಸೇವೆ ಮಾಡುವೆ ಹಾಗೂ ರಾಮನು ನನ್ನ ಉತ್ತರಾಧಿಕಾರಿಯಾಗಿರುವನು' ಎಂದು ಅಪ್ಪಣೆ ಮಾಡುತ್ತಾರೆ.
ಕೆಲವು ದಿನಗಳ ನಂತರ ಸೋಮನು ಗುರುಗಳಲ್ಲಿ ತನ್ನ ಮನೆಗೆ ಹೋಗುವ ಅನುಮತಿ ಕೇಳುತ್ತಾನೆ. ಆಗ ಶ್ರೀ ಗುರುಗಳು ಶಾಂತವಾಗಿರುತ್ತಾರೆ. ಅವರಿಗೆ ಸೋಮನು ಆ ಸಮಯದಲ್ಲಿ ಮನೆಗೆ ಹೋಗುವುದು ಇಷ್ಟವಿರುವುದಿಲ್ಲ; ಆದರೆ ಸೋಮನು ಗುರುಗಳ ಅನುಮತಿ ಇಲ್ಲದಿದ್ದರೂ ಮನೆಗೆ ಹೋಗುತ್ತಾನೆ. ಬಹಳ ಸಮಯದ ನಂತರ ಅವನು ಮರಳಿ ಬರುತ್ತಾನೆ ಹಾಗೂ ಗುರುಗಳ ಎದುರು ನಿಲ್ಲುತ್ತಾನೆ. ಆಗ ಗುರುಗಳ ಕಣ್ಣಿನಲ್ಲಿ ಕಣ್ಣಿರು ಬರುತ್ತದೆ ಹಾಗೂ ಅವರು ಅವನ ಕಡೆಗೆ ಸುಮ್ಮನೆ ನೋಡುತ್ತಾರೆ; ಆದರೆ ಮರುಕ್ಷಣವೇ ಕಠೋರವಾಗಿ ರಾಮನಿಗೆ 'ಇವನಿಗಾಗಿ ಆಶ್ರಮದ ಬಾಗಿಲು ಮುಚ್ಚಿವೆ, ಇವನು ಇಲ್ಲಿಂದ ಹೊರಡಬೇಕು' ಎಂದು ಆಜ್ಞೆ ಮಾಡುತ್ತಾರೆ.
ಕೆಲ ಸಮಯದ ನಂತರ ರಾಮನು ತಡೆಯಲಾರದೇ ಗುರುಗಳಿಗೆ 'ಗುರುಗಳೇ, ನೀವು ಸೋಮನ ವಿಷಯದಲ್ಲಿ ಅಷ್ಟೊಂದು ಕಠೋರ ನಿರ್ಣಯ ತೆಗೆದುಕೊಂಡಿರುವಿರಿ; ಆದರೆ ನಿಮ್ಮ ಕಣ್ಣಿನಲ್ಲಿ ಕಣ್ಣೀರು ಏಕಿತ್ತು?' ಎಂದು ಕೇಳುತ್ತಾನೆ. ಅದಕ್ಕೆ ಗುರುಗಳು 'ಅವನಿಗೆ ಸಾಧನೆಯಲ್ಲಿ ಮುಂದೆ ಹೋಗುವ ಕ್ಷಮತೆಯು ಬಹಳ ಇತ್ತು; ಆದರೆ ಅವನು ಮನೆಗೆ ಹೋಗಿ ಕೆಟ್ಟ ಸಂಗತಿಗಳಿಂದ ಸಾಧನೆಯ ಎಲ್ಲ ಫಲವನ್ನು ಕಳೆದುಕೊಂಡು ಭಿಕ್ಷುಕನಾಗಿ ಬಂದನು, ಈ ವಿಷಯವೆ ನನ್ನ ಆಶ್ರುಗಳ ಕಾರಣ' ಎಂದು ಹೇಳಿದರು.
ಮಕ್ಕಳೇ, ಮೇಲಿನ ಕಥೆಯಿಂದ 'ಗುರುಗಳು ತಮ್ಮ ಶಿಷ್ಯನ ಸಾಧನೆಯಲ್ಲಿ ಪ್ರಗತಿಯಾಗಬೇಕು ಎಂದು ಸತತ ಚಡಪಡಿಸುತ್ತಿರುತ್ತಾರೆ' ಎಂಬುದು ಗಮನಕ್ಕೆ ಬರುತ್ತದೆ. ಆದುದರಿಂದಲೇ ಗುರುಗಳನ್ನು 'ಬ್ರಹ್ಮ' ಎಂದರೆ ದೇವರೊಂದಿಗೆ ಹೋಲಿಸುತ್ತಾರೆ!
ಪ್ರೀತಿಪಾತ್ರನಾದ ಶಿಷ್ಯ – ಕಲ್ಯಾಣ
ಸಮರ್ಥ ರಾಮದಾಸ ಸ್ವಾಮಿಗಳು ತಮ್ಮ ಶಿಷ್ಯಂದಿರೊಂದಿಗೆ ಸಜ್ಜನಗಡ ಕೋಟೆ(ಮಹಾರಾಷ್ಟ್ರ ರಾಜ್ಯದ ಒಂದು ಕೋಟೆ)ಯಲ್ಲಿ ವಾಸವಾಗಿದ್ದರು. ಆ ಕೋಟೆಯಲ್ಲಿ ನೀರು ಸರಬರಾಜಿನ ವ್ಯವಸ್ಥೆ ಇರಲಿಲ್ಲ. ಆದ್ದರಿಂದ ಕಲ್ಯಾಣ ಎಂಬ ಒಬ್ಬ ಶಿಷ್ಯನು ಸತ್ಸೇವೆ ಎಂದು ಕೋಟೆಯ ಕೆಳಗೆ ಇದ್ದ ಹಳ್ಳಿಯಿಂದ ನೀರನ್ನು ಕೊಡದಲ್ಲಿ ತುಂಬಿಕೊಂಡು ತರುತ್ತಿದ್ದನು. ಈ ಕಾರ್ಯವು ಅವನ ದಿನದ ಬಹಳಷ್ಟು ಸಮಯವನ್ನು ತೆಗೆದುಕೊಳ್ಳುತ್ತಿತ್ತು ಮತ್ತು ಅವನಿಗೆ ಆಧ್ಯಾತ್ಮಿಕ ವಿಷಯಗಳನ್ನು ಅಧ್ಯಯನ ಮಾಡಲು ಕಡಿಮೆ ಸಮಯ ಸಿಗುತ್ತಿತ್ತು. ಉಳಿದ ಶಿಷ್ಯಂದಿರು ದಿನವಿಡೀ ಪ್ರಶ್ನೋತ್ತರಗಳ ಗೋಷ್ಠಿ ಮತ್ತು ವಿಚಾರ ವಿನಿಮಯಗಳನ್ನು ಮಾಡುತ್ತಾ ರಾಮದಾಸ ಸ್ವಾಮಿಗಳಿಂದ ಧಾರ್ಮಿಕ ಗ್ರಂಥಗಳ ಬಗ್ಗೆ ಮಾರ್ಗದರ್ಶನ ಪಡೆದುಕೊಳ್ಳುತ್ತಿದ್ದರು. ಆದರೂ ಕಲ್ಯಾಣನೇ ಗುರುಗಳಿಗೆ ಪ್ರೀತಿಪಾತ್ರನಾಗಿದ್ದನು. ಶಿಷ್ಯಂದಿರಿಗೆ ಏಕೆ ಹೀಗೆ ಎಂದು ಅರ್ಥವಾಗಿರಲಿಲ್ಲ, ಆದ್ದರಿಂದ ಅವರು ಕಲ್ಯಾಣನ ಮೇಲೆ ಸ್ವಲ್ಪ ಮತ್ಸರ ಪಡುತ್ತಿದ್ದರು. ರಾಮದಾಸ ಸ್ವಾಮಿಗಳಿಗೆ ಅವರ ಭಾವನೆಗಳು ಚೆನ್ನಾಗಿ ತಿಳಿದಿದ್ದವು.
ಒಂದು ದಿನ, ಶಿಷ್ಯಂದಿರಿಗೆ ಮಾರ್ಗದರ್ಶನ ಮಾಡುತ್ತಿದ್ದಾಗ, ರಾಮದಾಸ ಸ್ವಾಮಿಗಳು ಅವರಿಗೆ ಒಂದು ಕ್ಲಿಷ್ಟಕರ ಪ್ರಶ್ನೆಯೊಂದನ್ನು ಕೇಳಿದರು. ಯಾರಿಗೂ ಉತ್ತರ ಹೇಳಲಾಗಲಿಲ್ಲ. ಅದೇ ಸಮಯದಲ್ಲಿ ಕಲ್ಯಾಣನು ಅಲ್ಲಿ ಹಾದು ಹೋಗುತ್ತಿದ್ದನು, ಆಗ ಗುರುಗಳು ಅವನನ್ನು ಕರೆದು ಅದೇ ಪ್ರಶ್ನೆಯನ್ನು ಕೇಳಿದರು. ಎಲ್ಲರೂ ಆಶ್ಚರ್ಯಗೊಳ್ಳುವಂತೆ, ಕಲ್ಯಾಣನಿಗೆ ಸರಿಯಾದ ಉತ್ತರ ಗೊತ್ತಿತ್ತು.
ಉಳಿದ ಶಿಷ್ಯರು ರಾಮದಾಸ ಸ್ವಾಮಿಗಳನ್ನು ಕೇಳಿದರು ಇದು ಹೇಗೆ ಸಾಧ್ಯ? ಕಲ್ಯಾಣನು ಯಾವಾಗಲೋ ಒಂದು ಸಲ ನಮ್ಮೊಂದಿಗೆ ಅಧ್ಯಯನ ಮಾಡುತ್ತಾನೆ. ಅವನು ಹೇಗೆ ಇಂತಹ ಕ್ಲಿಷ್ಟಕರವಾದ ಪ್ರಶ್ನೆಗೆ ಉತ್ತರ ಕೊಟ್ಟನು? ಅದಕ್ಕೆ ರಾಮದಾಸ ಸ್ವಾಮಿಗಳು ಉತ್ತರಿಸಿದರು, ಧಾರ್ಮಿಕ ಗ್ರಂಥಗಳು ಬೋಧಿಸುವುದನ್ನು ಕಾರ್ಯತಃ ಮಾಡುತ್ತಿರುವವನು ಅವನೊಬ್ಬನೇ. ಪ್ರತಿದಿನ ಅವನು ಭಗವಂತನಿಗೋಸ್ಕರವೇ ಮಾಡುತ್ತಿದ್ದೇನೆ ಎಂಬ ಭಾವವನ್ನಿಟ್ಟುಕೊಂಡು ನಿಜವಾದ ಅರ್ಥದಲ್ಲಿ ಸತ್ಸೇವೆಯನ್ನು ಮಾಡುತ್ತಾನೆ. ಧಾರ್ಮಿಕ ಗ್ರಂಥಗಳ ಕುರಿತಾಗಿ ಕೇವಲ ಬೌದ್ಧಿಕ ತಿಳುವಳಿಕೆ ಸಾಕಾಗದು. ಕೂಡಲೇ ಶಿಷ್ಯರು ತಮ್ಮ ತಪ್ಪನ್ನು ಅರ್ಥಮಾಡಿಕೊಂಡರು. ಎಲ್ಲರೂ ತಮ್ಮ ಬೌದ್ಧಿಕ ಪ್ರತಿಭೆಯ ಕುರಿತಾಗಿ ಗರ್ವಪಡುತ್ತಿದ್ದರು, ಆದರೆ ಕಲ್ಯಾಣನಿಗೆ ಭಗವಂತನ ಪ್ರತಿ ತೀವ್ರವಾದ ಪ್ರೀತಿಯಿತ್ತು, ಆದ್ದರಿಂದ ಅವನ ಮುಖಾಂತರ ಭಗವಂತನೇ ಉತ್ತರ ಕೊಟ್ಟನು.
ಕಲ್ಯಾಣನಂತೆ ಭಗವಂತನ ಪ್ರತಿ ತೀವ್ರವಾದ ಪ್ರೀತಿಯನ್ನಿಟ್ಟು ಸೇವೆ ಮಾಡಿದರೆ ಮತ್ತು ಅವನಂತಹ ಚಾರಿತ್ರ್ಯವನ್ನು ಬೆಳೆಸಿಕೊಂಡರೆ ನಾವೂ ಕೂಡ ಉತ್ತಮ ಶಿಷ್ಯರಾಗಬಲ್ಲೆವು. ಇದು ಸಾಧ್ಯವಾಗಬೇಕಾದರೆ, ಧಾರ್ಮಿಕ ಗ್ರಂಥಗಳ ಬೋಧನೆಗಳಾದ ಭಗವಂತನ ನಾಮಜಪ ಮಾಡುವುದು, ಇತರರ ಸೇವೆ ಮಾಡುವುದು ಇತ್ಯಾದಿಗಳನ್ನು ಅಧ್ಯಯನ ಮಾಡುವುದು ಮತ್ತು ಅವುಗಳನ್ನು ಕೃತಿಗೆ ತರುವುದನ್ನು ಮಾಡಬೇಕು.
ರಾಮಾನುಜಾಚಾರ್ಯರ ಪರೀಕ್ಷೆ
ರಾಮಾನುಜರು ಶಠಕೋಪಸ್ವಾಮಿಗಳ ಶಿಷ್ಯರಾಗಿದ್ದರು. ಸ್ವಾಮಿಗಳು ರಾಮಾನುಜರಿಗೆ ಈಶ್ವರಪ್ರಾಪ್ತಿಯ ರಹಸ್ಯವನ್ನು ಹೇಳಿದ್ದರು ಆದರೆ ಅದನ್ನು ಯಾರಿಗೂ ಹೇಳಬಾರದೆಂದು ತಾಕೀತು ಮಾಡಿದ್ದರು. ಆದರೆ ರಾಮಾನುಜರು ಗುರುಗಳ ಈ ಆಜ್ಞೆಯನ್ನು ಪಾಲಿಸಲಿಲ್ಲ. ಗುರುಗಳು ಯಾವ ಜ್ಞಾನವನ್ನು ಕೊಟ್ಟಿದ್ದರೋ, ಈಶ್ವರ ಪ್ರಾಪ್ತಿಯ ಯಾವ ಮಾರ್ಗವನ್ನು ಹೇಳಿದ್ದರೋ, ಆ ಜ್ಞಾನವನ್ನು ಅವರು ಜನರಿಗೆ ನೀಡಲು ಪ್ರಾರಂಭಿಸಿದರು. ಶಠಕೋಪಸ್ವಾಮಿಗಳಿಗೆ ಈ ಬಗ್ಗೆ ತಿಳಿದಾಗ ಅವರು ಬಹಳ ಕೋಪಗೊಂಡರು. ಅವರು ರಾಮಾನುಜರನ್ನು ಕರೆದು, ’ನನ್ನ ಆಜ್ಞೆಯನ್ನು ಉಲ್ಲಂಘಿಸಿ ನೀನು ಸಾಧನೆಯ ರಹಸ್ಯವನ್ನು ಎಲ್ಲರಿಗೂ ಹೇಳುತ್ತಿರುವೆ, ಇದು ಅಧರ್ಮವಾಗಿದೆ, ಪಾಪವಾಗಿದೆ! ಇದರ ಪರಿಣಾಮ ಏನಾಗುತ್ತದೆ ಎಂಬುದು ನಿನಗೆ ತಿಳಿದಿದೆಯೇ ?’ ಎಂದು ಕೇಳಿದರು.
ಆಗ ರಾಮಾನುಜರು ನಮ್ರತೆಯಿಂದ, ’ಗುರುದೇವ, ಗುರುಗಳ ಆಜ್ಞೆ ಉಲ್ಲಂಘಿಸಿದರೆ ಶಿಷ್ಯನು ನರಕಕ್ಕೆ ಹೋಗಬೇಕಾಗುತ್ತದೆ.’ ಎಂದು ಹೇಳಿದರು. ಶಠಕೋಪಸ್ವಾಮಿಗಳು ’ಇದು ನಿನಗೆ ತಿಳಿದಿದ್ದರೂ ನೀನು ಹೀಗೇಕೆ ಮಾಡಿದೆ ?’ ಎಂದು ಕೇಳಿದಾಗ, ರಾಮಾನುಜರು ಹೇಳಿದರು, ’ವೃಕ್ಷವು ತನ್ನ ಸರ್ವಸ್ವವನ್ನು ಜನರಿಗೆ ಕೊಡುತ್ತದೆ. ಅದಕ್ಕೆ ಯಾವಾಗಲೂ ಸ್ವಾರ್ಥದ ನೆನಪಾಗುವುದಿಲ್ಲ. ನಾನು ಇದೆಲ್ಲವನ್ನೂ ಜನರ ಕಲ್ಯಾಣವಾಗಬೇಕು, ಜನರಿಗೂ ಈಶ್ವರ ಪ್ರಾಪ್ತಿಯ ಆನಂದ ದೊರೆಯಬೇಕು’ ಎಂಬ ಉದ್ದೇಶದಿಂದ ಮಾಡಿದ್ದೇನೆ. ಇದಕ್ಕಾಗಿ ನನಗೆ ನರಕಕ್ಕೆ ಹೋಗಬೇಕಾದರೂ ಪರವಾಗಿಲ್ಲ, ನನಗೆ ಅದರ ಬಗ್ಗೆ ದುಃಖವಾಗುವುದಿಲ್ಲ.’ ಎಂದು ಹೇಳಿದರು.
ಈಶ್ವರಪ್ರಾಪ್ತಿಯ ಸಾಧನೆ ಇತರರಿಗೂ ಹೇಳುವ ರಾಮಾನುಜರ ತಳಮಳವನ್ನು ನೋಡಿ ಸ್ವಾಮಿಗಳು ಪ್ರಸನ್ನರಾದರು. ಅವರು ರಾಮಾನುಜರನ್ನು ಆಲಿಂಗಿಸಿದರು. ಅವನಿಗೆ ಸರ್ವೋತ್ತಮವಾದ ಆಶೀರ್ವಾದ ನೀಡಿದರು ಹಾಗೂ ಜನರಲ್ಲಿ ನಿಜವಾದ ಜ್ಞಾನದ ಪ್ರಚಾರ ಮಾಡಲು ಬಲು ಪ್ರೀತಿಯಿಂದ ಕಳುಹಿಸಿದರು.
ಮಕ್ಕಳೇ, ರಾಮಾನುಜರು ಈಶ್ವರಪ್ರಾಪ್ತಿಯ ಸಾಧನೆ ಇತರರಿಗೆ ಹೇಳಿದರು. ಅವರ ತಳಮಳದಿಂದ ಸ್ವಾಮಿಗಳು ಅವರ ಮೇಲೆ ಪ್ರಸನ್ನರಾದರು. ನಾವೂ ನಮಗೆ ದೊರೆತ ಜ್ಞಾನವನ್ನು ಹೀಗೆಯೇ ಹಂಚಬೇಕು.
ಸಂತ ಚೋಖಾಮೇಳಾರ ವಿಠಲ ಭಕ್ತಿ!
ಮಂಗಳವೇಢಾದ ಸಂತ ಚೋಖಾಮೇಳಾರಿಗೆ ವಿಠಲನ ಮೇಲೆ ಅಪಾರ ಭಕ್ತಿಯಿತ್ತು. ಅವರು ಸತತ ವಿಠಲನ ನಾಮಸ್ಮರಣೆಯಲ್ಲಿಯೇ ಮೈ ಮರೆಯುತ್ತಿದ್ದರು. ಆದರೆ ಊರಿನ ಕೆಲವು ದುಷ್ಟರು ಅವರಿಗೆ ಬಹಳ ತೊಂದರೆ ಕೊಡುತ್ತಿದ್ದರು. ಒಂದು ದಿನ ಚೋಖಾಮೇಳಾರವರು ಈ ತೊಂದರೆಯಿಂದ ಬೇಸತ್ತು ಊರು ಬಿಟ್ಟು ತಮ್ಮ ಪತ್ನಿ ಸೋಯರಾಳೊಂದಿಗೆ ಪಂಢರಪುರಕ್ಕೆ ಬಂದರು.
ಚೋಖಾಮೇಳಾರವರು ಪಂಢರಪುರದಲ್ಲಿ ಒಂದು ಗುಡಿಸಲನ್ನು ಕಟ್ಟಿದರು. ಅವರ ವಿಠಲ-ಉಪಾಸನೆ ನಡೆಯುತ್ತಲೇ ಇತ್ತು. ವಿಠಲ ದರ್ಶನದ ಬಗ್ಗೆ ಅವರಲ್ಲಿರುವ ತೀವೃ ತಳಮಳದಿಂದ ಒಮ್ಮೆ ದೇವಸ್ಥಾನದ ಬಾಗಿಲಿಗೆ ಬೀಗ ಹಾಕಿದ್ದರೂ ಅವರು ತಾನಾಗಿಯೇ ವಿಠಲನ ಚರಣಗಳವರೆಗೆ ತಲುಪಿದರು. ಅಂದಿನಿಂದ ಅಲ್ಲಿನ ಪೂಜಾರಿಗಳು ದೇವಸ್ಥಾನದಲ್ಲಿ ಕಾವಲು ಇಟ್ಟರು. ಆದರೆ ವಿಠಲನ ಭೇಟಿಯ ಅವರ ತೀವ್ರ ತಳಮಳವನ್ನು ಕಂಡು ದೇವರೇ ಅವರ ಮನೆಗೆ ಅವರನ್ನು ಭೇಟಿಯಾಗಲು ಹೋಗತೊಡಗಿದರು. ಈಗ ಚೋಖಾಮೇಳಾ ತಮ್ಮ ಮನೆಯಲ್ಲಿಯೇ ತೃಪ್ತ ಮನಸ್ಸಿನಿಂದ ವಿಠಲನ ಸೇವೆಯಲ್ಲಿ ಮಗ್ನರಾಗತೊಡಗಿದರು.
ಒಮ್ಮೆ ವಿಠಲನು ಚೋಖಾಮೇಳಾರಿಗೆ ‘ನಾನು ನಿನ್ನ ಮನೆಗೆ ಭೋಜನಕ್ಕೆ ಬರುವೆನು’, ಎಂದು ಹೇಳಿದನು. ಇದನ್ನು ತಿಳಿದು ಸೋಯರಾಗೆ ಬಹಳ ಆನಂದವಾಯಿತು. ದೇವರಿಗೆ ಭೋಜನದಲ್ಲಿ ಏನು ಮಾಡಿ ಬಡಿಸಲಿ, ಎಂಬ ವಿಚಾರದಲ್ಲಿಯೇ ನದಿಯ ದಂಡೆಯಲ್ಲಿ ಭೇಟಿಯಾದ ಓರ್ವ ಹೆಂಗಸಿನ ಬಳಿ ಕೆಲವು ಪದಾರ್ಥಗಳನ್ನು ಬೇಡಿದಳು. ಮಾತು ಮಾತಿನಲ್ಲಿಯೇ ಅವಳು ಸಾಕ್ಷಾತ ವಿಠಲನು ತಮ್ಮ ಮನೆಗೆ ಭೋಜನಕ್ಕೆ ಬರಲಿದ್ದಾನೆ ಎಂಬ ಸಂಗತಿಯನ್ನು ಹೇಳಿದಳು. ಇದನ್ನು ಕೇಳಿದ ಆ ಹೆಂಗಸಿಗೆ ಆಶ್ಚರ್ಯವಾಯಿತು. ನೋಡುನೋಡುತ್ತಿದಂತೆಯೇ ಈ ವಾರ್ತೆ ಊರಿನಲ್ಲಿ ಹಬ್ಬಿತು. ಅನೇಕರು ಈ ಮಾತಿನ ಚೇಷ್ಟೆ ಮಾಡಿದರು. ಈ ಬಗ್ಗೆ ಯಾರೂ ನಂಬಲಿಲ್ಲ.
ಓರ್ವ ಗ್ರಹಸ್ಥನು ರಾತ್ರಿಯ ಹೊತ್ತು ಕದ್ದು ಮುಚ್ಚಿ ಚೋಖಾಮೇಳಾರ ಗುಡಿಸಲಿನ ಬಳಿ ಬಂದು ಒಳಗೆ ಇಣುಕಿ ನೋಡಿದನು, ಅದೆಂತಹ ಆಶ್ಚರ್ಯ ! ವಿಠಲ ಮೂರ್ತಿಯ ಚರಣದಲ್ಲಿ ಚೋಖಾಮೇಳಾರು ಕುಳಿತಿದ್ದರು. ಸಮೀಪದಲ್ಲಿಯೇ ಸೋಯರಾ ನಮ್ರತೆಯಿಂದ ನಿಂತುಕೊಂಡಿದ್ದಳು. ಚೋಖಾಮೇಳಾರು ‘ನೋಡಿದಿಯಾ ಸೋಯರಾ ! ಪ್ರೇಮಮಯಿ, ಭಕ್ತವತ್ಸಲನಾದ ಭಗವಂತನು ಭಕ್ತರಿಗಾಗಿ ಏನು ಮಾಡಲೂ ಸಿದ್ಧನಿದ್ದಾನೆ’ ಎಂದು ಹೇಳುತ್ತಿದ್ದರು. ಸೋಯರಾಳು ವಿಠಲನ ಚರಣಗಳಲ್ಲಿ ನಮಸ್ಕಾರ ಮಾಡಿದಳು. ಅವಳ ಕಣ್ಣುಗಳಲ್ಲಿ ಅಶ್ರು ಹರಿಯುತ್ತಿತ್ತು. ಭಗವಂತನು ಅವಳನ್ನು ಎಬ್ಬಿಸಿ ‘ನನಗೂ ನಿಮ್ಮ ಭೇಟಿಯ ತಳಮಳವಾಗುತ್ತಿತ್ತು.’ ಎಂದು ಹೇಳಿದನು. ಆ ಗ್ರಹಸ್ಥನು ಇದೆಲ್ಲವನ್ನು ನೋಡುತ್ತಿದ್ದನು. ಅನಂತರ ಸೋಯರಾಳು ಭೋಜನಕ್ಕೆ ಎಲೆಯಿಟ್ಟು ಊಟ ಬಡಿಸಿದಳು. ವಿಠಲನು ಭೋಜನ ಪ್ರಾರಂಭಿಸಿದನು. ಆ ಗ್ರಹಸ್ಥನಿಗೆ ದೇವರ ಮೂರ್ತಿಯ ಚಲಿಸುತ್ತಿರುವ ಕೈಗಳು ಕಾಣಿಸುತ್ತಿದ್ದವು. ಅದೇ ಸಮಯಕ್ಕೆ ಚೋಖಾಮೇಳಾರ ‘ನಿಧಾನ, ನಿಧಾನ ! ಇದೇನು ! ದೇವರ ಪೀತಾಂಬರದ ಮೇಲೆ ಮಜ್ಜಿಗೆ ಚೆಲ್ಲಿದೆಯಲ್ಲ !’ ಎಂದು ಹೇಳುವುದು ಅವನ ಕಿವಿಗೆ ಬಿತ್ತು,
ಇದೆಲ್ಲಾ ನೋಡಿ ಆ ಗ್ರಹಸ್ಥನು ಅಲ್ಲಿಂದ ಹೊರಟನು. ನೋಡಿದ ನಿಜ ಸಂಗತಿಯನ್ನು ಅವನು ದಾರಿಯಲ್ಲಿ ಸಿಕ್ಕ ಎಲ್ಲರಿಗೂ ಹೇಳುತ್ತ ಹೊರಟನು. ಜನರು ಸೇರಿದರು. ಈ ಸಂಗತಿಯು ದೇವಸ್ಥಾನದ ಪೂಜಾರಿಗಳ ವರೆಗೆ ತಲುಪಿತು. ಸತ್ಯ ಸಂಗತಿಯನ್ನು ತಿಳಿಯಲು ಎಲ್ಲರೂ ದೇವಸ್ಥಾನದ ಬಾಗಿಲು ತೆರೆದು ನೋಡಿದರು ಹಾಗೂ ಅಲ್ಲಿನ ದೃಷ್ಯವನ್ನು ಕಂಡು ಆಶ್ಚರ್ಯಚಕಿತರಾದರು. ಎಂದಿನಂತೆಯೇ ವಿಠಲನ ಮೂರ್ತಿಯು ಪೀಠದ ಮೇಲೆ ನಿಂತಿತ್ತು. ವಸ್ತ್ರ, ಆಭೂಷಣಗಳೂ ಹಾಗೆಯೇ ಇದ್ದವು; ಆದರೆ ತೊಡಸಿದ ಪೀತಾಂಬರದ ಮೇಲೆ ಮಜ್ಜಿಗೆ ಚೆಲ್ಲಿತ್ತು. ನೆಂಟನಾಗಿ ಸಾಕ್ಷಾತ ವಿಠಲನು ನಿಜಕ್ಕೂ ತನ್ನ ಸಗುಣ ರೂಪದಲ್ಲಿ ಚೋಖಾಮೇಳಾರ ಮನೆಗೆ ಹೋಗಿ ಭೋಜನ ಮಾಡಿದನು. ಇದನ್ನು ನೋಡಿ ಪೂಜಾರಿಯ ಸಹಿತ ಎಲ್ಲರೂ ಆ ಹಿರಿಯ ಸಂತ ಚೋಖಾಮೇಳಾರ ಕಾಲು ಹಿಡಿದರು.
ಬಾಲಮಿತ್ರರೇ, ನೋಡಿ! ತಮ್ಮ ಅಪಾರವಾದ ವಿಠಲಭಕ್ತಿಯಿಂದ ಚೋಖಾಮೇಳಾರು, ಸಂತ ಚೋಖಾಮೇಳಾ ಆದರು. ಅವರ ಮನೆಗೆ ಸಾಕ್ಷಾತ್ ವಿಠಲನು ಅವರನ್ನು ಭೇಟಿಯಾಗಲು ಹೋಗುತ್ತಿದ್ದನು.
ದುಷ್ಟ ವಾಲಿಯ ವಧೆ
ಬಾಲಮಿತ್ರರೇ, ರಾಮನವಮಿಯಂದು ಪ್ರಭು ಶ್ರೀರಾಮನ ಜನನವಾಯಿತು. ನಾವು ಎಲ್ಲೆಡೆ ಶ್ರೀರಾಮನನ್ನು ಆದರ್ಶ ರಾಜನೆಂದು ಉಲ್ಲೇಖಿಸುತ್ತೇವೆ. ರಾಮನು ವಾಲಿಯನ್ನು ವಧಿಸಿ ಸುಗ್ರೀವನಿಗೆ ಅವನ ರಾಜ್ಯವನ್ನು ಹೇಗೆ ದೊರಕಿಸಿಕೊಟ್ಟನು, ಎಂಬುದನ್ನು ರಾಮಾಯಣದ ಘಟನೆಯಿಂದ ನಾವು ನೋಡೋಣ.
ಅಣ್ಣ ತಮ್ಮಂದಿರಾದ ವಾಲಿ ಮತ್ತು ಸುಗ್ರೀವರು ಕಿಶ್ಕಿಂದಾ ನಗರದಲ್ಲಿ ವಾಸಿಸುತ್ತಿದ್ದರು. ಅವರಲ್ಲಿ ಪರಸ್ಪರರ ಬಗ್ಗೆ ಬಹಳ ಪ್ರೇಮವಿತ್ತು. ಅವರಿಬ್ಬರಲ್ಲಿ ವಾಲಿಯು ಹಿರಿಯವನಾಗಿದ್ದರಿಂದ ಅವನು ಆ ನಗರದ ರಾಜನಾಗಿದ್ದನು. ಒಮ್ಮೆ ಆ ನಗರಕ್ಕೆ ಮಾಯಾವಿ ಎಂಬ ಓರ್ವ ಬಲಾಢ್ಯ ರಾಕ್ಷಸ ಬಂದನು. ವಾಲಿ ಹಾಗೂ ಆ ರಾಕ್ಷಸನ ನಡುವೆ ಭಯಂಕರ ಯುದ್ಧವಾಯಿತು. ಇಬ್ಬರೂ ಸಮಬಲದ ಪರಾಕ್ರಮಿಗಳಾಗಿದ್ದರು. ಯುದ್ಧ ಮಾಡುತ್ತ ಇಬ್ಬರೂ ಒಂದು ಗುಹೆಯನ್ನು ಪ್ರವೇಶಿಸಿದರು. ಗುಹೆಯ ದ್ವಾರದಲ್ಲಿ ನಿಂತಿದ್ದ ಸುಗ್ರೀವನಿಗೆ ಒಳಗಿನಿಂದ ಕೇಳೀಬರುವ ಶಬ್ಧದಿಂದ ಗುಹೆಯಲ್ಲಿ ಮಹಾಭಯಂಕರ ಯುದ್ಧ ನಡೆಯುತ್ತಿರುವುದರ ಅರಿವಾಯಿತು. ಒಮ್ಮೆಲೆ, ಗುಹೆಯಿಂದ ಒಂದು ದೊಡ್ಡ ಧ್ವನಿಸಹಿತ ರಕ್ತವು ಪ್ರವಾಹದಂತೆ ಹರಿದು ಬರುತ್ತಿರುವುದು ಕಾಣಿಸಿತು. ಅದನ್ನು ನೋಡಿ ಸುಗ್ರೀವನಿಗೆ ’ತನ್ನ ಅಣ್ಣನಿಗೆ ವೀರಗತಿ ಪ್ರಾಪ್ತಿಯಾಗಿದೆ’ ಎಂದು ಅನಿಸಿತು. ಮಾಯಾವಿ ರಾಕ್ಷಸನು ಗುಹೆಯಿಂದ ಹೊರಬಂದು ತನ್ನನ್ನು ಕೊಲ್ಲಬಹುದು, ಎಂಬ ಭಯದಿಂದ ಸುಗ್ರೀವನು ಒಂದು ದೊಡ್ಡ ಬಂಡೆಗಲ್ಲಿನಿಂದ ಗುಹೆಯ ದ್ವಾರವನ್ನು ಮುಚ್ಚಿಟ್ಟು ನಗರಕ್ಕೆ ಮರಳಿದನು. ಸುಗ್ರೀವನಿಗೆ ತನ್ನ ಅಣ್ಣನು ತನಗೆ ಬಿಟ್ಟು ಹೋದನೆಂಬ ದುಃಖವಿತ್ತು; ಆದರೆ ಜನತೆಯ ಆಗ್ರಹದಿಂದ ಹಾಗೂ ವಾಲಿಯ ಮಗನು ವಯಸ್ಸಿನಲ್ಲಿ ಚಿಕ್ಕವನಿರುವುದರಿಂದ ಕೊನೆಗೆ ಸುಗ್ರೀವನು ರಾಜ್ಯಾಭಿಷೇಕ ಮಾಡಿಸಿಕೊಂಡನು.
ಕೆಲ ದಿನಗಳ ನಂತರ ವಾಲಿಯು ಮರಳಿ ಬಂದನು. ಆಗ ಅವನು ’ರಾಜ್ಯದ ಆಸೆಯಿಂದ ಸುಗ್ರೀವನು ತನಗೆ ಮೋಸ ಮಾಡಿದನು’ ಎಂದು ತಪ್ಪಾಗಿ ತಿಳಿದು ಬಹಳ ಕೋಪಗೊಂಡನು. ಸಿಟ್ಟಿನ ಭರದಲ್ಲಿ ಅವನು ತನ್ನ ಪ್ರಿಯ ತಮ್ಮನನ್ನು ರಾಜ್ಯದಿಂದ ಹೊರಹಾಕಿ ಅವನ ಪತ್ನಿಯನ್ನು ಬಂಧಿಸಿದನು. ತನ್ನ ಬಲಾಢ್ಯ ಅಣ್ಣನ ಕೋಪಕ್ಕೆ ಹೆದರಿ ಸುಗ್ರೀವನು ಓಡಿ ಹೋದನು ಹಾಗೂ ಋಷ್ಯಮೂಕ ಪರ್ವತದಲ್ಲಿ ಸುರಕ್ಷಿತವಾಗಿ ಇದ್ದನು. ಮಾತಂಗ ಋಷಿಯ ಶಾಪದಿಂದ ವಾಲಿಯು ಅಲ್ಲಿಗೆ ಬರುವಂತೆ ಇರಲಿಲ್ಲ.
ಕೆಲ ಸಮಯದ ನಂತರ ರಾಮ-ಲಕ್ಷ್ಮಣರಿಬ್ಬರೂ ಸೀತೆಯನ್ನು ಹುಡುಕುತ್ತ ಆ ಪರ್ವತದ ಬಳಿ ಹೋಗುತ್ತಿದ್ದರು. ಇದನ್ನು ನೋಡಿ ಹನುಮಂತನು ಸುಗ್ರೀವನಿಗೆ ಈ ಬಗ್ಗೆ ತಿಳಿಸಿದನು. ತಕ್ಷಣ ಸುಗ್ರೀವನು ರಾಮನ ಬಳಿ ಹೋಗಿ ಅವನ ಕಾಲು ಹಿಡಿದು ತನಗಾದ ಅನ್ಯಾಯದ ಬಗ್ಗೆ ಹೇಳಿದನು. ರಾಮನು ಎಲ್ಲವನ್ನೂ ಶಾಂತವಾಗಿ ಕೇಳಿಕೊಂಡು, ’ಮಾತೆಯ ಸಮಾನಳಿರುವ ತನ್ನ ಅತ್ತಿಗೆಯನ್ನು ಬಂಧಿಸಿರುವುದರಿಂದ ವಾಲಿಯು ಮೃತ್ಯುವಿಗೆ ಪಾತ್ರನಾಗಿದ್ದಾನೆ. ನಾನು ವಾಲಿಯನ್ನು ವಧಿಸಿ ನಿನ್ನ ಪತ್ನಿ ಹಾಗೂ ನಿನ್ನ ರಾಜ್ಯವನ್ನು ನಿನಗೆ ದೊರಕಿಸಿ ಕೊಡುವೆನು’ ಎಂದು ಹೇಳಿದನು.
ನಿಶ್ಚಯಿಸಿದಂತೆ ಸುಗ್ರೀವನು ರಾಮ ಮತ್ತು ಲಕ್ಷ್ಮಣರೊಂದಿಗೆ ಕಿಶ್ಕಿಂದೆಗೆ ಹೋದನು ಹಾಗೂ ವಾಲಿಯನ್ನು ಯುದ್ಧಕ್ಕೆ ಆಹ್ವಾನಿಸಿದನು. ಮೊದಲೇ ಕೋಪಗೊಂಡಿದ್ದ ವಾಲಿ ಸುಗ್ರೀವನನ್ನು ಕಂಡ ಕೂಡಲೆ ಅತ್ಯಂತ ಕೋಪದಿಂದ ಅವನ ಎದುರಿಗೆ ನಿಂತನು. ಇಬ್ಬರಲ್ಲಿ ಯುದ್ಧ ಪ್ರಾರಂಭವಾಯಿತು. ಇಲ್ಲಿ ಗಿಡದ ಮರೆಯಲ್ಲಿ ನಿಂತ ರಾಮ ಲಕ್ಷ್ಮಣರು ದಿಗ್ಭ್ರಾಂತರಾದರು; ಏಕೆಂದರೆ ವಾಲಿ ಹಾಗೂ ಸುಗ್ರೀವರಲ್ಲಿ ಇಷ್ಟೊಂದು ಸಾಮ್ಯವಿತ್ತೆಂದರೆ ಅವರಿಬ್ಬರನ್ನೂ ಗುರುತಿಸುವುದು ಕಠಿಣವಾಗಿತ್ತು. ನಂತರ ರಾಮನು ಗುರುತಿಗಾಗಿ ಸುಗ್ರೀವನಿಗೆ ಕೊರಳಿಗೆ ಹಾಕಲು ಒಂದು ಹೂವಿನ ಹಾರವನ್ನು ಕೊಟ್ಟನು. ಸುಗ್ರೀವನು ತನ್ನ ಸಹಾಯಕ್ಕೆ ರಾಮನಿರುವುದರಿಂದ ಆ ಹಾರವನ್ನು ಕೊರಳಲ್ಲಿ ಹಾಕಿಕೊಂಡು ಅತ್ಯಂತ ಆತ್ಮವಿಶ್ವಾಸದಿಂದ ಯುದ್ಧ ಮಾಡತೊಡಗಿದನು. ಕೆಲ ಸಮಯದ ನಂತರ ಸುಗ್ರೀವನು ಯುದ್ಧದಲ್ಲಿ ಹತಬಲನಾಗುತ್ತಿರುವುದನ್ನು ಕಂಡು ರಾಮನು ತನ್ನ ಬಾಣದಿಂದ ವಾಲಿಯನ್ನು ಹೊಡೆದನು. ಎದೆಯನ್ನು ಸೀಳಿದ ರಾಮನ ಬಾಣದಿಂದ ವಾಲಿಯುಧರೆಗುರುಳಿ ಮರಣ ಹೊಂದಿದನು. ಕೊನೆಯಲ್ಲಿ ಮಾತ್ರ ಅವನು ರಾಮ ಹಾಗೂ ಸುಗ್ರೀವರ ಬಳಿ ಕ್ಷಮೆ ಯಾಚಿಸಿದನು.
ಮಕ್ಕಳೇ. ವಾಲಿ ಹಾಗೂ ಸುಗ್ರೀವರ ಕಥೆಯಿಂದ ತಪ್ಪು ತಿಳುವಳಿಕೆಯಿಂದ ಎಷ್ಟು ಅನರ್ಥವಾಗುತ್ತದೆ ಎಂಬುದು ತಿಳಿಯಿತು. ಆದ್ದರಿಂದ ವಿಚಾರಿಸದೇ ಯಾವುದೇ ಕೃತಿ ಮಾಡಬಾರದು.
ಸಂತ ತುಕಾರಾಮ ಮಹಾರಾಜರ ಬುದ್ಧಿಯ ಸೂಕ್ಷ್ಮತೆ
ಬಾಲಮಿತ್ರರೇ, ಸಾಧನೆ ಮಾಡಿದ ನಂತರ ನಮ್ಮ ಬುದ್ಧಿಯು ಸೂಕ್ಷ್ಮವಾಗುತ್ತದೆ, ಅಂದರೆ ನಮಗೆ ಪಂಚಜ್ಞಾನೇಂದ್ರಿಯಗಳು,ಮನಸ್ಸು ಮತ್ತು ಬುದ್ಧಿಯ ಆಚೆಗಿನ ಸಂವೇದನೆಗಳ ಅರಿವಾಗುತ್ತದೆ. ಕೆಲವು ಸಂತರು ಓರ್ವ ವ್ಯಕ್ತಿಯ ಭೂತಕಾಲ ಅಥವಾ ಭವಿಷ್ಯದ ಬಗ್ಗೆ ಹೇಳುತ್ತಾರೆ, ಇದನ್ನೇ ಸೂಕ್ಷ್ಮದ ಜ್ಞಾನ ಎಂದು ಹೇಳುತ್ತಾರೆ. ನಾವು ಈ ಕಥೆಯ ಮೂಲಕ ಸಾಮಾನ್ಯ ಮನುಷ್ಯನಂತೆ ಕಾಣುವ ಸಂತ ತುಕಾರಾಮ ಮಹಾರಾಜರು ಜನಹಿತಕ್ಕಾಗಿ ಈ ಜ್ಞಾನವನ್ನು ಹೇಗೆ ಉಪಯೋಗಿಸಿದರು ಎಂಬುದನ್ನು ತಿಳಿಯೋಣ.
ಸಂತ ತುಕಾರಾಮ ಮಹಾರಾಜರು ದೇಹು ಎಂಬ ಊರಿನಲ್ಲಿ ವಾಸಿಸುತ್ತಿದ್ದರು. ಒಂದು ದಿನ ಆ ಊರಿನಲ್ಲಿ ಓರ್ವ ಸಾಧು ಬರುವವನಿದ್ದಾನೆ ಎಂಬ ಸುದ್ದಿ ಹರಡಿತು. ಸಾಧುವಿನ ಸ್ವಾಗತಕ್ಕಾಗಿ ಊರಿನ ಜನರು ದೊಡ್ಡ ಮಂಟಪವನ್ನು ನಿಲ್ಲಿಸಿದರು. ಅವರ ದರ್ಶನ ಪಡೆಯಲು ಬಹಳ ಜನ ನೆರೆದಿದ್ದರು. ಎಲ್ಲರೂ ಅವರ ಗುಣಗಾನ ಮಾಡುತ್ತಿದ್ದರು. ಆ ಸಾಧುವಿನ ದರ್ಶನದಿಂದ ನಮ್ಮ ಎಲ್ಲ ಇಚ್ಛೆಗಳು ಪೂರ್ಣಗೊಳ್ಳುವವು, ಎಂಬ ಸುದ್ದಿ ಊರಿನಲ್ಲೆಲ್ಲ ಹರಡಿತ್ತು. ಊರಿನಲ್ಲಿ ಸಾಧುಗಳು ಪ್ರತ್ಯಕ್ಷ ಬಂದಾಗ ಪ್ರತಿಯೊಬ್ಬರೂ ಅವರ ದರ್ಶನಕ್ಕೆ ಹೋಗಿ ದಕ್ಷಿಣೆಯನ್ನು ಕೊಟ್ಟು ವಿಭೂತಿ ಮತ್ತು ಪ್ರಸಾದ ತೆಗೆದುಕೊಳ್ಳಲು ಆರಂಭಿಸಿದರು. ಊರ ಜನರು ‘ಮನೆಯಲ್ಲಿ ಲಕ್ಷ್ಮೀ ನೆಲೆಸಲಿ, ಹೊಲಗಳಲ್ಲಿ ಬೆಳೆ ಸಮೃದ್ಧವಾಗಿ ಬರಲಿ, ಬಾವಿಯಲ್ಲಿ ನೀರು ಬರಲಿ’ ಇಂತಹ ಅನೇಕ ವ್ಯಾವಹಾರಿಕ ಅಡಚಣೆಗಳನ್ನು ಸಾಧುವಿನ ಬಳಿ ವ್ಯಕ್ತಪಡಿಸುತ್ತಿದ್ದರು. ಸಾಧು ಕಣ್ಣುಮುಚ್ಚಿ ಕುಳಿತುಕೊಳ್ಳುತ್ತಿದ್ದನು. ಬರುವ ಜನರು ಅವನ ಕಾಲಮೇಲೆ ತಲೆ ಇಟ್ಟು ತಮ್ಮ ಅಡಚಣೆಗಳನ್ನು ಹೇಳಿಕೊಳ್ಳುತ್ತಿದ್ದರು. ಅಡಚಣೆಗಳನ್ನು ಕೇಳಿದ ನಂತರ ಆ ಸಾಧು ಅವರಿಗೆ ವಿಭೂತಿಯನ್ನು ಹಚ್ಚುತ್ತಿದ್ದನು. ಅದರ ಬದಲಾಗಿ ಜನರಿಗೆ ಅವನಿಗೆ ದಕ್ಷಿಣೆ ಕೊಡಬೇಕಾಗುತ್ತಿತ್ತು. ಅನಂತರ ಆ ಸಾಧು ಅವರಿಗೆ ಆಶೀರ್ವಾದ ಕೊಡುತ್ತಿದ್ದನು.
ತುಕಾರಾಮ ಮಹಾರಾಜರಿಗೆ ಈ ಸುದ್ಧಿ ತಿಳಿಯಿತು. ಆಗ ಅವರು ಆ ಸಾಧುವಿನ ದರ್ಶನ ಪಡೆಯಬೇಕೆಂದು ನಿರ್ಧರಿಸಿದರು. ಸಾಧುವಿನ ದರ್ಶನಕ್ಕೆ ಬಹಳ ಜನಸಂದಣಿಯಿತ್ತು. ತುಕಾರಾಮ ಮಹಾರಾಜರು ಆ ಗದ್ದಲದಲ್ಲಿ ನಿಧಾನವಾಗಿ ದಾರಿ ಮಾಡಿಕೊಂಡು ಆ ಸಾಧುವಿನ ಎದುರು ಬಂದು ಕುಳಿತರು. ಸಾಧು ಕಣ್ಣುಮುಚ್ಚಿ ಆರಾಮವಾಗಿ ಕುಳಿತಿದ್ದನು. ಅರ್ಧಗಂಟೆಯಾದರೂ, ಅವನು ಕಣ್ಣು ತೆರೆದಿರಲಿಲ್ಲ. ಜನರು ’ಸಾಧು ಯಾವಾಗ ಕಣ್ಣು ತೆರೆಯುವನು ಮತ್ತು ನಮ್ಮಮೇಲೆ ಅವನ ದಿವ್ಯದೃಷ್ಟಿ ಯಾವಾಗ ಬೀಳುವುದು,’ ಎಂಬುದಾಗಿ ಕುತೂಹಲದಿಂದ ದಾರಿ ಕಾಯುತ್ತಿದ್ದರು. ತುಕಾರಾಮ ಮಹಾರಾಜರಿಗಂತೂ ಈ ಸಾಧುವಿನ ಬಗ್ಗೆ ಪೂರ್ಣ ಕಲ್ಪನೆಯಿತ್ತು.
ಕೆಲ ಸಮಯದ ನಂತರ ಸಾಧುವು ಕಣ್ಣು ತೆರೆದನು. ಕಣ್ಣು ತೆರೆದು ನೋಡಿದರೆ ಎದುರಿನಲ್ಲಿ ತುಕಾರಾಮ ಮಹಾರಾಜರು ಕುಳಿತಿದ್ದಾರೆ. ಅವನು ತುಕಾರಾಮ ಮಹಾರಾಜರಿಗೆ ’ನೀವು ಯಾವಾಗ ಬಂದಿರಿ ?’ ಎಂದು ಕೇಳಿದನು. ತಕ್ಷಣ ತುಕಾರಾಮ ಮಹಾರಾಜರು ’ಯಾವಾಗ ತಾವು ಕಣ್ಣು ಮುಚ್ಚಿ ಮನಸ್ಸಿನಲ್ಲಿ ವಿಚಾರ ಮಾಡುತ್ತಿದ್ದಿರೋ ’ಈ ಊರು ಚೆನ್ನಾಗಿದೆ, ಇಲ್ಲಿಯ ಭೂಮಿಯು ಫಲವತ್ತಾಗಿದೆ ಹಾಗೂ ತೋಟಗಾರಿಕೆಗೆ ಪೂರಕವಾಗಿದೆ. ಇಲ್ಲಿನ ಜನರೂ ನಮಗೆ ಬಹಳ ಗೌರವ ಕೊಡುತ್ತಿದ್ದಾರೆ, ಸಾಕಷ್ಟು ಕಾಣಿಕೆಯನ್ನೂ ಕೊಡುತ್ತಿದ್ದಾರೆ. ಆ ಕಾಣಿಕೆಯಿಂದ ಇಲ್ಲಿನ ಭೂಮಿಯನ್ನು ಖರೀದಿಸಿ ಇಲ್ಲಿ ಕಬ್ಬು ಬೆಳೆದರೆ ಒಳ್ಳೆಯ ಫಸಲು ಬರುವುದು. ಅದರಿಂದ ತಮಗೆ ಎಣಿಸಲಾಗದಷ್ಟು ಹಣ ದೊರೆಯುವುದು. ಆ ಹಣವನ್ನು ತಾವು ಎಣಿಸುತ್ತ ಕುಳಿತಿದ್ದಿರಿ’, ಆ ಸಮಯಕ್ಕೆ ನಾನು ಇಲ್ಲಿ ಬಂದೆನು.’ ಎಂದು ಹೇಳಿದರು. ಈ ಮಾತುಗಳನ್ನು ಕೇಳಿ ಆ ಢೋಂಗಿ ಸಾಧುವಿನ ಮುಖವು ಒಮ್ಮೆಲೆ ಬಿಳುಚಿಕೊಂಡಿತು. ಅವನ ಬಾಯಿಯಿಂದ ಒಂದು ಅಕ್ಷರವೂ ಹೊರಡಲಿಲ್ಲ. ಅವನು ಈಗ ಈ ಊರಿನಲ್ಲಿ ತನ್ನ ಸ್ಥಿತಿ ಏನಾಗುವುದು ಎಂಬುದನ್ನು ಅರಿತನು. ಅವನು ಮಾರನೆಯ ದಿನ ಸೂರ್ಯೋದಯದ ಮೊದಲೇ ತನ್ನ ಗಂಟು-ಮೂಟೆ ಕಟ್ಟಿ ಯಾರಿಗೂ ತಿಳಿಸದೆ ಅಲ್ಲಿಂದ ಹೊರಟು ಹೋದನು.
ಬಾಲಮಿತ್ರರೆ ನೋಡಿ, ಕಪಟ ಹೇಗೆ ಹೊರ ಬೀಳುತ್ತದೆ! ಈಶ್ವರನು ಮಾತನಾಡುವುದಿಲ್ಲ; ಆದರೆ ಈಶ್ವರನ ಸಗುಣ ರೂಪವಾಗಿರುವ ಸಂತರು ಮಾತನಾಡಬಲ್ಲರು. ಸಂತರು ಸರಿಯಾಗಿ ಗುರುತಿಸುತ್ತಾರೆ. ತುಕಾರಾಮ ಮಹಾರಾಜರ ಕೃಪೆಯಿಂದ ಜನರು ಆ ಢೋಂಗಿ ಸಾಧುವಿನಿಂದ ಪಾರಾದರು.
No comments:
Post a Comment