ಪರೀಕ್ಷೆಯ ಪ್ರಶ್ನೆಯನ್ನು ವಿರೋಧಿಸಿ ತುಂಬಿದ ಸಭಾಗೃಹದಿಂದ ಹೊರನಡೆದ ರಾಷ್ಟ್ರಾಭಿಮಾನಿ ಸುಭಾಷಚಂದ್ರ ಬೋಸ್
ನೇತಾಜಿ ಸುಭಾಷಚಂದ್ರ ಬೋಸ್ ‘ಐ.ಸಿ.ಎಸ.’ ಪರೀಕ್ಷೆಯಲ್ಲಿ ತೇರ್ಗಡೆಯಾಗಿ ಇಂಗ್ಲೆಂಡ್.ನಿಂದ ಭಾರತಕ್ಕೆ ಮರಳಿದರು. ಇಲ್ಲಿ ಅವರಿಗೆ ಇನ್ನೊಂದು ಲಿಖಿತ ಪರೀಕ್ಷೆಯನ್ನು ಎದುರಿಸಬೇಕಾಗಿತ್ತು. ಪರೀಕ್ಷೆಯಲ್ಲಿ ಕುಳಿತುಕೊಂಡ ಅವರು ಪ್ರಶ್ನೆ ಪತ್ರಿಕೆಯನ್ನು ನೋಡಿ ಕೂಡಲೇ ರೊಚ್ಚಿಗೆದ್ದರು. ಆ ಪ್ರಶ್ನೆ ಪತ್ರಿಕೆಯಲ್ಲಿ ಭಾಷಾಂತರಕ್ಕೆ ಒಂದು ಪರಿಚ್ಛೇದವನ್ನು ನೀಡಲಾಗಿತ್ತು.
ಆ ಪರಿಚ್ಛೇದದ ಶಿರೋನಾಮೆಯು ಮುಂದಿನಂತೆ ಇತ್ತು – ‘Indian Soldiers are generally Dishonest’ (ಅಂದರೆ ‘ಸಾಮಾನ್ಯವಾಗಿ ಭಾರತೀಯ ಸೈನಿಕರು ಅಪ್ರಾಮಾಣಿಕರು’). ಇಂತಹ ವೋಶಯದ ಮೇಲೆ ಇದ್ದ ಆಂಗ್ಲ ಪರಿಚ್ಛೇದವನ್ನು ಪರೀಕ್ಷಾರ್ಥಿಗಳು ಭಾಷಾಂತರ ಮಾಡಬೇಕಿತ್ತು. ಇದನ್ನು ನೋಡಿದ ಸುಭಾಷಚಂದ್ರ ಈ ಪ್ರಶ್ನೆಗೆ ತಮ್ಮ ವಿರೋಧವನ್ನು ವ್ಯಕ್ತಪಡಿಸಿದರು. ಪರೀಕ್ಷೆಯ ಮೇಲ್ವಿಚಾರಕರಿಗೆ ಆ ಪ್ರಶ್ನೆಯನ್ನು ರದ್ದುಪಡಿಸುವಂತೆ ಕೇಳಿಕೊಂಡರು. ಆದರೆ ‘ಈ ಪ್ರಶ್ನೆ ಅತ್ಯಂತ ಮಹತ್ವದ್ದಾಗಿದೆ. ಈ ಪ್ರಶ್ನೆಗೆ ಉತ್ತರಿಸದ ಅಭ್ಯರ್ಥಿಗಳಿಗೆ ಉನ್ನತ ಪದವಿಯನ್ನು ನಿರಾಕರಿಸಲಾಗುವುದು’ ಎಂಬ ಉತ್ತರವನ್ನು ಮೇಲ್ವಿಚಾರಕರು ನೀಡಿದರು. ಈ ಉತ್ತರವನ್ನು ಕೇಳಿದ ಸುಭಾಷ.ನ ಕೋಪ ದ್ವಿಗುಣಗೊಂಡಿತು. ಕೈಯಲ್ಲಿ ಇದ್ದ ಪ್ರಶ್ನೆ ಪತ್ರಿಕೆಯನ್ನು ಅವರು ಚೂರು ಚೂರು ಮಾಡಿದರು. ಮೇಲ್ವಿಚಾರಕರನ್ನು ಸಂಬೋಧಿಸಿ ‘ನಿಮ್ಮ ಉನ್ನತ ಹುದ್ದೆ ಬೆಂಕಿಗೆ ಹಾಕಿ! ನನ್ನ ದೇಶದ ಬಾಂಧವರ ವಿರುದ್ಧ ಇಂತಹ ಹುಸಿ ಆರೋಪವನ್ನು ಸಹಿಸಿ ಬದುಕುವ ಬದಲು ಹಸಿವಿನಿಂದ ಸಾಯುವುದೇ ಲೇಸು! ಇಂತಹ ಗುಲಾಮಗಿರಿಗಿಂತ ಸಾವೇ ಒಳಿತು!’ ಎಂದು ಉದ್ಗರಿಸಿದ ಸುಭಾಷ ಪರೀಕ್ಷೆಯ ಸಭಾಗೃಹದಿಂದ ಹೊರನಡೆದರು.
ತಾತ್ಪರ್ಯ : ‘ಸ್ವಹಿತ’ಕ್ಕಿಂತ ‘ಸ್ವದೇಶ’ ಅಧಿಕ ಮಹತ್ವದ್ದಾಗಿದೆ.
ವಿಚಾರ : ತನ್ನ ಮಾತೃಭೂಮಿಯನ್ನು ಪ್ರೀತಿಸದವನು ಯಾರನ್ನೂ ಪ್ರೀತಿಸಲಾರ.
ಆಧಾರ : (ಮರಾಠಿ ಮೂಲ) ‘ಆಶಿ ಮೂಲ್ಯೇ ಅಸೆ ಸಂಸ್ಕಾರ’, ಸಂಪಾದಕ : ಪ್ರಕಾಶ ಅರ್ಜುನ ರಾಣೆ
ಗೋಪಾಲಕೃಷ್ಣ ಗೋಖಲೆಯವರ ಸತ್ಯವಂತಿಕೆ
ಗೋಪಾಲಕೃಷ್ಣ ಗೋಖಲೆಯವರು ಪ್ರಸಿದ್ಧ ಸಮಾಜ ಸುಧಾರಕರಾಗಿದ್ದರು. ತಂದೆ ಕೃಷ್ಣರಾವರು ಅತ್ಯಂತ ಪ್ರಾಮಾಣಿಕ ಮತ್ತು ಶಿಸ್ತುಬದ್ಧ ವ್ಯಕ್ತಿ ಎಂದು ಪ್ರಸಿದ್ದರಾಗಿದ್ದರು. ಮನೆಯ ಪರಿಸ್ಥಿತಿಯಿಂದಾಗಿ ತಮಗೆ ಒಳ್ಳೆಯ ಶಿಕ್ಷಣವನ್ನು ಪಡೆಯಲಾಗಲಿಲ್ಲ ಎಂಬ ದುಃಖವು ಸದಾಕಾಲ ಅವರನ್ನು ಕಾಡುತ್ತಿತು. ಆದುದರಿಂದ ತಮ್ಮ ಇಬ್ಬರೂ ಮಕ್ಕಳು (ಗೋವಿಂದ ಮತ್ತು ಗೋಪಾಲಕೃಷ್ಣ) ಬಹಳ ಓದಬೇಕು ಎಂದು ಬಯಸುತ್ತಿದ್ದರು. ಅವರ ಈ ಇಚ್ಛೆಗನುಸಾರ ಗೋವಿಂದ ಮತ್ತು ಗೋಪಾಲರ ಶಿಕ್ಷಣವು ಪ್ರಾರಂಭವಾಯಿತು.
ಕರವೀರ ಸಂಸ್ಥಾನದಲ್ಲಿ (ಇಂದಿನ ಕೊಲ್ಹಾಪುರ ಜಿಲ್ಲೆ) ಇರುವ ಕಾಗಲ್‌ನಲ್ಲಿ ಕಲಿಯುತ್ತಿರುವಾಗ ಗೋಪಾಲನ ಸತ್ಯ ಪ್ರಿಯತೆಯನ್ನು ತೋರಿಸುವಂತಹ ಒಂದು ಮಹತ್ವಪೂರ್ಣ ಘಟನೆಯು ನಡೆಯಿತು. ಒಮ್ಮೆ ಶಾಲೆಯಲ್ಲಿ ಗಣಿತದ ತರಗತಿಯು ನಡೆಯುತ್ತಿತ್ತು. ಹಿಂದಿನ ದಿನ ಶಿಕ್ಷಕರು ಮಕ್ಕಳಿಗೆ ಮನೆಪಾಠಕ್ಕೆಂದು ಕೆಲವು ಗಣಿತದ ಸಮಸ್ಯೆಗಳನ್ನು ನೀಡಿದ್ದರು. ಗುರುಗಳು ಎಲ್ಲರ ಪುಸ್ತಕಗಳನ್ನ್ನುಪರೀಕ್ಷಿಸಲು ಪ್ರಾರಂಭಿಸಿದರು. ಯಾರೂ ಸರಿಯಾಗಿ ಉತ್ತರವನ್ನು ಬರೆದಿರಲಿಲ್ಲ. ಅವರು ಗೋಪಾಲನ ಬಳಿ ಬಂದರು. ಗೋಪಾಲನು ಗಣಿತದ ಎಲ್ಲ ಸಮಸ್ಯೆಗಳನ್ನು ಸರಿಯಾಗಿ ಬಿಡಿಸಿದ್ದನು. ಅದನ್ನು ನೋಡಿ ಶಿಕ್ಷಕರಿಗೆ ಬಹಳ ಸಂತೋಷ ವಾಯಿತು. ಅವರು ಗೋಪಾಲನಿಗೆ ಶಹಬಾಷ್‌ಗಿರಿಯನ್ನು ನೀಡಿದರು. ಅವನನ್ನು ಮುಂದಿನ ಸಾಲಿನಲ್ಲಿ ಬಂದು ಕುಳಿತುಕೊಳ್ಳುವಂತೆ ಹೇಳಿದರು. ಗುರುಗಳು ತನಗೆ ನೀಡುತ್ತಿರುವ ಸನ್ಮಾನವನ್ನು ನೋಡಿ ಗೋಪಾಲನು ಅಳಲು ಪ್ರಾರಂಭಿಸಿದನು. ಶಿಕ್ಷಕರು ಗೋಪಾಲನ ಬಳಿ ಬಂದು ಏಕೆ ಅಳುತ್ತಿರುವೆ ಎಂದು ಪ್ರಶ್ನಿಸಿದಾಗ ಅವನು, “ಗುರುಗಳೇ ನನ್ನನ್ನು ಕ್ಷಮಿಸಿ, ನಾನು ನಿಮ್ಮ ಬಳಿ ಸುಳ್ಳನ್ನು ಹೇಳಿದ್ದೇನೆ. ಈ ಗಣಿತದ ಸಮಸ್ಯೆಗಳನ್ನು ನಾನು ಬಿಡಿಸಿದ್ದಲ್ಲ. ಆದುದರಿಂದ ನೀವು ನೀಡುತ್ತಿರುವ ಸನ್ಮಾನವು ನನಗೆ ಬೇಡ" ಎಂದು ತಪ್ಪೊಪ್ಪಿಕೊಂಡನು. ಶಿಕ್ಷಕರು ಗೋಪಾಲನ ಸತ್ಯಸಂಧತೆಯನ್ನು ಬಹಳ ಮೆಚ್ಚಿದರು. ಅವರು ಗೋಪಾಲನ ಬೆನ್ನನ್ನು ತಟ್ಟಿ ಸಮಾಧಾನಗೊಳಿಸಿದರು.
ತಂದೆಯ ಮರಣದ ನಂತರ ಗೋಪಾಲನ ಮನೆಯ ಆರ್ಥಿಕ ಪರಿಸ್ಥಿತಿಯು ತೀರಾ ಕೆಟ್ಟು ಹೋಯಿತು. ಆಗ ಗೋವಿಂದನು ತನ್ನ ಶಿಕ್ಷಣವನ್ನು ಅರ್ಧದಲ್ಲಿಯೇ ನಿಲ್ಲಿಸಿ ಕೆಲಸ ಮಾಡಲಾರಂಭಿಸಿದನು ಮತ್ತು ತನ್ನ ಇಷ್ಟಾನಿಷ್ಟಗಳನ್ನೆಲ್ಲ ಬದಿಗಿರಿಸಿ ಕಷ್ಟಪಟ್ಟಾದರೂ ಗೋಪಾಲನಿಗೆ ಶಿಕ್ಷಣ ನೀಡಬೇಕೆಂದು ನಿರ್ಧರಿಸಿದನು. ಗೋಪಾಲನಿಗೆ ಮನೆಯ ಪರಿಸ್ಥಿತಿಯ ಅರಿವಿತ್ತು. ಆದುದರಿಂದ ಅವನು ಅತ್ಯಂತ ಮಿತವ್ಯಯದಿಂದ ಕೊಲ್ಹಾಪುರದಲ್ಲಿ ಒಂದು ಹೊಟೇಲಿನಲ್ಲಿ ಊಟವನ್ನು ಮಾಡುತ್ತಾ ಓದನ್ನು ಮುಂದುವರಿಸುತ್ತಿದ್ದನು. ಅಲ್ಲಿ ಮೊಸರು ಬೇಕಾದರೆ ಒಂದು ಬಟ್ಟಲಿಗೆ ಎಂಟಾಣೆಯನ್ನು ಹೆಚ್ಚು ನೀಡಬೇಕಾಗುತ್ತಿತ್ತು. ಅದಕ್ಕಾಗಿ ಗೋಪಾಲನು ಯಾವತ್ತೂ ಮೊಸರನ್ನು ತೆಗೆದುಕೊಳ್ಳುತ್ತಿರಲಿಲ್ಲ. ಒಂದು ಬಾರಿ ಗೋಪಾಲನಿಗೆ ಮೊಸರು ತಿನ್ನಬೇಕೆಂದು ಬಹಳ ಆಸೆಯಾಯಿತು. ಮೊಸರನ್ನು ತಿಂದನು. ಆದರೆ ಅದಕ್ಕಾಗಿ ಪ್ರತಿ ಶನಿವಾರ ಉಪವಾಸ ಮಾಡಿ ಉಳಿಸಿದ ಹಣದಿಂದ ಆತನು ಮೊಸರನ್ನು ಖರೀದಿಸಿದ್ದನು. ಚಿಮಿಣಿಗಾಗಿ ತಗಲುವ ಎಣ್ಣೆಯನ್ನು ಉಳಿತಾಯ ಮಾಡಬೇಕೆಂದು ಅವನು ನಗರಪಾಲಿಕೆಯ ದೀಪದ ಬೆಳಕಿನಲ್ಲಿ ಅಧ್ಯಯನ ಮಾಡುತ್ತಿದ್ದನು. ಇಂತಹ ಕಠಿಣ ಪರಿಸ್ಥಿತಿಯಲ್ಲಿಯೂ ಆತನು ತನ್ನ ಶಿಕ್ಷಣವನ್ನು ಮುಂದುವರಿಸಿದನು.
ಸ್ವಾಭಿಮಾನ, ಸತ್ಯಪ್ರಿಯತೆ, ಕಷ್ಟವನ್ನು ಸಹಿಸುವ ಸ್ವಭಾವ ಇತ್ಯಾದಿ ಗುಣಗಳು ಆತನಲ್ಲಿ ಬಾಲ್ಯದಿಂದಲೇ ಮೈಗೂಡಿದ್ದವು. ಈ ಗುಣದಿಂದಲೇ ಮಹಾತ್ಮಾ ಗಾಂಧಿಯವರು ಗೋಖಲೆಯವರನ್ನು ತಮ್ಮ ಗುರುಗಳೆಂದು ಗೌರವಿಸುತ್ತಿದ್ದರು. ಸತ್ಯಕ್ಕಾಗಿ ಸ್ವತಃ ಹೋರಾಡುವುದು, ಸತ್ಯವಂತನಾಗಿರುವುದು ಮತ್ತು ಸತ್ಯವನ್ನೇ ನುಡಿಯಬೇಕೆಂದು ಆಗ್ರಹಿಸುವುದು ಮುಂತಾದ ತತ್ತ್ವಗಳನ್ನು ಗೋಪಾಲಕೃಷ್ಣ ಗೋಖಲೆಯವರು ತಮ್ಮ ನಡೆ ನುಡಿಯಿಂದ ಜಗತ್ತಿಗೆ ಸಾರಿದರು.
ಮಕ್ಕಳೇ, ನಾವು ಕೂಡ ಈ ಸದ್ಗುಣಗಳನ್ನು ನಾಮಜಪದೊಂದಿಗೆ ನಮ್ಮಲ್ಲಿ ಅಳವಡಿಸಿಕೊಂಡು ಸತ್‌ಪರಂಪರೆಯನ್ನು ಪಾಲಿಸುತ್ತಲಿರೋಣ.
ಸಮಯದ ಮಹತ್ವ
ಕ್ರಾಂತಿಕಾರರ ಮಾಲಿಕೆಯಲ್ಲಿ ಚಾಪೆಕರ ಸೋದರರ ಹೆಸರನ್ನು ಅತ್ಯಂತ ಆದರದಿಂದ ಹೇಳಲಾಗುತ್ತದೆ. ಮೂರೂ ಸಹೋದರರು ರಾಷ್ಟ್ರಕ್ಕಾಗಿ ನಗುತ್ತಲೇ ನೇಣುಗಂಬಕ್ಕೇರಿದವರು. ಆ ದಿನ ದಾಮೋದರ ಚಾಪೆಕರರನ್ನು ಸರವರಾ ಜೈಲಿನಲ್ಲಿ ನೇಣು ಹಾಕಲು ಕರೆದುಕೊಂಡು ಬರುತ್ತಿದ್ದರು.
ದಾಮೋದರರು ಆ ದಿವಸ ಪ್ರಸನ್ನ ಮತ್ತು ಆನಂದದಿಂದ ಇದ್ದರು. ಅವರ ಕೈಯಲ್ಲಿ ಭಗವದ್ಗೀತೆಯ ಪುಸ್ಥಕವಿತ್ತು. ಅವರು ಗೀತೆಯನ್ನು ಓದುತ್ತಲೇ ಶಿಕ್ಷೆಗಾಗಿ ಸಿದ್ಧರಾಗಿದ್ದರು. ನೇಣು ಹಾಕಲು ಸಮಯವಾದರೂ ಅಂಗ್ರೇಜಿ ಅಧಿಕಾರಿಗಳು ಬರಲಿಲ್ಲ. ೫ ನಿಮಿಷ ತಡವಾಗಿ ಅಂಗ್ರೇಜಿ ಅಧಿಕಾರಿಗಳು ಬಂದರು. ಅಂಗ್ರೇಜಿ ಅಧಿಕಾರಿಗಳ ಈ ಬೇಜವಬ್ದಾರಿ ನೋಡಿ ದಾಮೋದರರು ಕ್ರೋಧಿತರಾದರು. ಅವರು ಅತ್ಯಂತ ಚಾಣಾಕ್ಷತನದಿಂದ ಅಂಗ್ರೇಜಿಗಳಿಗೆ ಅವರ ತಪ್ಪನ್ನು ತೋರಿಸಿಕೊಟ್ಟರು. ಅವರು ಹೇಳಿದರು, "ನಾನು ಯಾವ ಸಮಾಜದಿಂದ ಬಂದಿದ್ದೀನೋ ಅಲ್ಲಿ ಎಲ್ಲರೂ ಅಂಗ್ರೇಜಿಗಳೆಂದರೆ ತುಂಬಾ ಕಟ್ಟುನಿಟ್ಟಾಗಿ ಸಮಯ ಪಾಲಿಸುತ್ತಾರೆ ಎಂದು ತಿಳಿಯುತ್ತಾರೆ. ಆದರೆ ಇಂದು ಅದು ಸುಳ್ಳು ಎಂದು ತಿಳಿಯಿತು".
ನೇಣುಗಂಬಕ್ಕೇರಲು ಸಿದ್ಧನಾಗಿದ್ದ ವ್ಯಕ್ತಿಯನ್ನೂ ಕಾಯುವಂತೆ ಮಾಡಿದ ಅಂಗ್ರೇಜರಿಗೆ ನಾಚಿಕೆಯಾಗಬೇಕು.
ಏಕಾಗ್ರತೆಯ ಮಹತ್ವ
ಒಮ್ಮೆ ಸ್ವಾಮೀ ವಿವೇಕಾನಂದರು ಅಮೇರಿಕಾದ ಚಿಕಾಗೊ ಪಟ್ಟಣದ ನದಿಯ ತೀರದಲ್ಲಿ ವಿಹರಿಸುತ್ತಿದ್ದರು. ಆಗ ಅವರಿಗೆ ಕೆಲವು ಹುಡುಗರು ಕೋವಿಯನ್ನು ಹಿಡಿದು ನದಿಯಲ್ಲಿ ತೇಲುತ್ತಿರುವ ಮೊಟ್ಟೆಯ ಚಿಪ್ಪನ ಮೇಲೆ ಗುರಿಯಿಡಲು ಪ್ರಯತ್ನಿಸುತ್ತಿರುವುದು ಕಂಡಿತು. ಅದರೆ ಅಲೆಗಳಿಂದ ಮೊಟ್ಟೆಯ ಚಿಪ್ಪು ಮೇಲೆ ಕೆಳಗೆ ತಿರುಗುತ್ತಿದ್ದರಿಂದ ಅವರಿಗೆ ಗುರಿಯಿಡಲು ಸಾಧ್ಯವಾಗಲ್ಲಿಲ್ಲ. ಬಹಳಷ್ಟು ಬಾರಿ ಪ್ರಯತ್ನಿಸಿಯೂ ಅವರಿಂದ ಮೊಟ್ಟೆಯ ಚಿಪ್ಪಿನ ಮೇಲೆ ಗುರಿಯಿಡಲು ಸಾಧ್ಯವಾಗಲಿಲ್ಲ.
ಸ್ವಾಮೀವಿವೇಕಾನಂದರು ಅವರ ಆಟವನ್ನು ಕೂತೂಹಲದಿಂದ ನಿಂತು ನೋಡುತ್ತಿದ್ದರು. ಆಗ ಹುಡುಗರು ಅವರನ್ನು ನೋಡಿ ’ಸರ್, ನೀವು ನಮ್ಮನ್ನು ಆಗಿನಿಂದ ನೋಡುತ್ತಿದ್ದೀರಿ, ನೀವು ಒಂದು ಬಾರಿ ಪ್ರಯತ್ನಿಸುವಿರೇ ?” ಎಂದು ಕೇಳಿದರು. ಸ್ವಾಮಿ ವಿವೇಕಾನಂದರು ನಗುತ್ತ ತಾನು ಪ್ರಯತ್ನಿಸಲು ಇಚ್ಛಿಸುವುದಾಗಿ ತಿಳಿಸಿದರು. ಸ್ವಾಮಿಗಳು ಬಂದೂಕನ್ನು ಕೈಗೆತ್ತಿಕೊಂಡು ಮೊಟ್ಟೆಯ ಚಿಪ್ಪಿಗೆ ಗುರಿಯಿಟ್ಟು ಅದನ್ನು ಸ್ವಲ್ಪ ಸಮಯ ಏಕಾಗ್ರತೆಯಿಂದ ನೋಡಿದರು. ಅನಂತರ ಅವರು ೧೨ ಬಾರಿ ಗುಂಡು ಹೊಡೆದಾಗ ಪ್ರತಿಬಾರಿಯೂ ಅದು ಒಂದೊಂದು ಮೊಟ್ಟೆಯ ಚಿಪ್ಪಿಗೆ ತಗುಲಿತು!
ಸ್ವಾಮೀಜಿಯ ಕೌಶಲ್ಯವನ್ನು ಕಂಡು ಮಕ್ಕಳು ಅಚ್ಚರಿಗೊಂಡು ಸ್ವಾಮೀ ವಿವೇಕಾನಂದರ ಬಳಿ ಹೋಗಿ ’ನೀವು ಇದನ್ನು ಹೇಗೆ ಮಾಡಿದಿರಿ ?’ ಎಂದು ಕೇಳಿದರು. ಅದಕ್ಕೆ ವಿವೇಕಾನಂದರು ನಗುತ್ತ ’ನಾನು ಎಂದಿಗೂ ಬಂದೂಕಿನಿಂದ ಗುರಿ ಇಡಲಿಲ್ಲ’ ಎಂದು ಹೇಳುತ್ತಾರೆ. ಆಗ ಹುಡುಗರು ’ಹಾಗಿದ್ದರೆ ನೀವು ಇಷ್ಟು ಒಳ್ಳೆಯ ರೀತಿಯಲ್ಲಿ ಹೇಗೆ ಗುರಿಇಟ್ಟಿರಿ ?’ ಎಂದು ಕೇಳುತ್ತಾರೆ. ಅದಕ್ಕೆ ಸ್ವಾಮೀ ವಿವೇಕಾನಂದರು ’ನಿಮಗೆ ಒಂದು ರಹಸ್ಯವನ್ನು ಹೇಳುತ್ತೇನೆ. ನೀವು ಏನೇ ಮಾಡಿದರೂ ಬೇರೆ ಯಾವುದರ ಬಗ್ಗೆಯೂ ಯೋಚಿಸದೇ ನಿಮ್ಮ ಸಂಪೂರ್ಣ ಗಮನವನ್ನು ಅದರ ಮೇಲೆ ಕೇಂದ್ರೀಕರಿಸಿರಿ. ನೀವು ಬಂದೂಕಿನಿಂದ ಗುರಿಯಿಡುತ್ತಿದ್ದಲ್ಲಿ ನಿಮ್ಮ ಮನಸ್ಸನ್ನು ಗುರಿಯ ಮೇಲೆ ಕೇಂದ್ರೀಕರಿಸಿರಿ. ನಿಮ್ಮ ಗುರಿ ತಪ್ಪುವುದಿಲ್ಲ. ಏಕಾಗ್ರತೆಯಿಂದ ಅದ್ಭುತಗಳನ್ನು ಸಾಧಿಸಬಹುದು. ನಾವು ಓದುವಾಗಲೂ ಕೈಯಲ್ಲಿರುವ ಪಾಠದ ಬಗ್ಗೆಯೇ ವಿಚಾರ ಮಾಡಬೇಕು. ಆಗಲೇ ನೀವು ಓದಿರುವ ವಿಷಯಗಳನ್ನು ಸುಲಭವಾಗಿ ನೆನಪಿನಲ್ಲಿಟ್ಟುಕೊಳ್ಳಬಹುದು.’ ಎಂದು ಹೇಳಿದರು.
ನೀತಿ: ಏಕಾಗ್ರತೆ ಅಂದರೆ ಗುರಿಯನ್ನು ಬಿಟ್ಟು ಬೇರೆ ವಿಷಯಗಳ ಬಗ್ಗೆ ವಿಚಾರ ಮಾಡದಿರುವುದು. ಸತತ ವಿಚಾರ ಮಾಡುವುದು ಹಾಗೂ ಚಂಚಲತೆಯು ಮನಸ್ಸಿನ ಗುಣಧರ್ಮವಾಗಿರುವುದರಿಂದ ಏಕಾಗ್ರತೆಯನ್ನು ಗಳಿಸುವುದು ಕಷ್ಟಕರವಾಗಿದೆ. ಪ್ರತಿದಿನ ದೇವರ ನಾಮಸ್ಮರಣೆಯನ್ನು ಮಾಡುವುದರಿಂದ ಮನಸ್ಸನ್ನು ಏಕಾಗ್ರತೆಗೊಳಿಸಲು ಸಹಾಯವಾಗುತ್ತದೆ.
ಮನಃಶಾಂತಿ
ಒಬ್ಬನು ಮನಶಾಂತಿಯನ್ನು ಹುಡುಕಿಕೊಂಡು ವಿವಿಧ ಆಧಾತ್ಮಿಕ ಗುರುಗಳು ಹೇಳಿದಂತೆ ವಿವಿಧ ರೀತಿಯಲ್ಲಿ ಪ್ರಯತ್ನಿಸುತ್ತಿದ್ದನು. ಅವನು ಒಮ್ಮೆ ಸ್ವಾಮಿ ವಿವೇಕಾನಂದರನ್ನು ಭೇಟಿಯಾಗಿ ’ಸ್ವಾಮೀಜಿ, ನಾನು ಒಂದು ಮುಚ್ಚಿದ ಕೋಣೆಯಲ್ಲಿ ಗಂಟೆಗಟ್ಟೆಲೆ ಕುಳಿತು ಧ್ಯಾನ ಮಾಡುತ್ತೇನೆ, ಅದರೆ ನನಗೆ ಮನಃಶಾಂತಿ ಸಿಗಲಿಲ್ಲ’ ಎಂದು ಹೇಳಿದನು. ಆಗ ಸ್ವಾಮೀ ವಿವೇಕಾನಂದರು ’ ಮೊಟ್ಟಮೊದಲು ನೀನು ನಿನ್ನ ಕೋಣೆಯ ಬಾಗಿಲನ್ನು ತೆರೆದಿಡು. ಅನಂತರ ಹೊರಗೆ ದುಃಖದಲ್ಲಿರುವವರನ್ನು, ಅನಾರೋಗ್ಯದಿಂದ ಬಳಲುವವರನ್ನು ಹಾಗೂ ಹಸಿದವರನ್ನು ನೋಡಿ ಅವರಿಗೆ ನಿನ್ನಿಂದ ಸಾಧ್ಯವಾದಷ್ಟು ಸಹಾಯ ಮಾಡು’ ಎಂದು ಹೇಳಿದರು.
ಆಗ ಆ ವ್ಯಕ್ತಿಯು ವಿವೇಕಾನಂದರಿಗೆ ’ರೋಗಿಗಳ ಸೇವೆಯನ್ನು ಮಾಡುವುದರಿಂದ ನನಗೆ ರೋಗ ಬಂದರೆ ಏನು ಮಾಡಲಿ?’ ಎಂದು ಕೇಳಿದನು. ಅವನ ಈ ಸಂದೇಹವನ್ನು ಕೇಳಿ ಸ್ವಾಮೀ ವಿವೇಕಾನಂದರು ’ನೀನು ಪ್ರತಿಯೊಂದು ಒಳ್ಳೆಯ ಕೆಲಸದಲ್ಲಿಯೂ ತಪ್ಪನ್ನು ಹುಡುಕುತ್ತಿರುವುದರಿಂದ ನಿನಗೆ ಮನಃಶಾಂತಿ ಸಿಗುತ್ತಿಲ್ಲ, ಶ್ರೇಷ್ಠ ಕಾರ್ಯವನ್ನು ಮಾಡಲು ಬಹಳ ತಡ ಮಾಡಬಾರದು. ಅಂತೆಯೇ ಅದರಲ್ಲಿ ತಪ್ಪು ಕಂಡು ಹಿಡಿಯಬಾರದು. ಇದೇ ಮನಃಶಾಂತಿಯನ್ನು ಪಡೆಯುವ ಏಕೈಕ ಮಾಧ್ಯಮವಾಗಿದೆ.’ ಎಂದು ಹೇಳಿದರು.
ನನ್ನ ಹತ್ತಿರ ಭಯಂಕರ ಆಯುಧಗಳಿವೆ ! – ಸ್ವಾ. ಸಾವರಕರ
ಲಂಡನ್ ನಗರದಲ್ಲಿ ಒಂದು ದಿನ ಗುಪ್ತಚರರು ಸ್ವಾ. ಸಾವರಕರರನ್ನು ದಾರಿ ಮಧ್ಯದಲ್ಲಿ ನಿಲ್ಲಿಸಿ ಕೇಳಿದರು, "ಮಹಾಶಯರೇ, ಕ್ಷಮಿಸಿರಿ. ನಮಗೆ ನಿಮ್ಮ ಬಗ್ಗೆ ಸಂಶಯವಿದೆ. ನಿಮ್ಮ ಹತ್ತಿರ ಘಾತಕ ಆಯುಧಗಳಿವೆ ಎಂದು ನಿಶ್ಚಿತ ಸುಳಿವು ಸಿಕ್ಕಿದೆ. ಆದ್ದರಿಂದ ನಿಮ್ಮ ತಪಾಸಣೆಯನ್ನು ಮಾಡುತ್ತೇವೆ". ಸಾವರಕರರು ನಿಂತರು, ಗುಪ್ತಚರರು ತಪಾಸಣೆ ಮಾಡಿದರು. ಆದರೆ ಏನೂ ಸಿಗಲಿಲ್ಲ. ಆಗ ಗುಪ್ತಚರರ ಪ್ರಮುಖ ಅಧಿಕಾರಿಗಳು ಕೇಳಿದರು, "ಕ್ಷಮಿಸಿರಿ ತಪ್ಪು ಸುದ್ದಿಯಿಂದಾಗಿ ನಿಮಗ ತೊಂದರೆ ನೀಡಿದೆವು". ಆಗ ಸಾವರಕರರು ಹೇಳಿದರು, "ನಿಮಗೆ ಸಿಕ್ಕ ಸುಳಿವು ತಪ್ಪಲ್ಲ. ನನ್ನ ಬಳಿ ಘಾತಕ ಆಯುಧವಿದೆ". ಜೇಬಿನಲ್ಲಿದ್ದ ಪೆನ್ನನ್ನು ತೋರಿಸಿ ಹೇಳಿದರು, "ನೋಡಿ ಇದೇ ಆ ಆಯುಧ, ಇದರಿಂದ ಹೊರ ಬರುವ ಒಂದೊಂದು ಶಬ್ಧ ಯುವಕರಿಗೆ ಅನ್ಯಾಯದ ವಿರುದ್ಧ ಹೋರಾಡುವ ಪ್ರೇರಣೆಯನ್ನು ನೀಡುತ್ತದೆ. ಈ ಶಬ್ಧಗಳಿಂದ ದೇಶಭಕ್ತರ ರಕ್ತ ಕುದಿಯುತ್ತದೆ ಮತ್ತು ಅವರು ತಮ್ಮ ಪ್ರಾಣವನ್ನು ಒತ್ತೆ ಇಟ್ಟು ಹೋರಾಡಲು ಸಿದ್ಧರಾಗುತ್ತಾರೆ".
No comments:
Post a Comment