Saturday, November 26, 2022

ಕ್ಷೀರ ಕ್ರಾಂತಿಯ ಜನಕ






ಇಂದು ಕ್ಷೀರ ಪಿತಾಮಹ ವರ್ಗೀಸ್ ಕುರಿಯನ್ ರವರ ಜನ್ಮದಿನ 


      

ಭಾರತದ ಕ್ಷೀರ ಕ್ರಾಂತಿಯ ಜನಕ ವರ್ಗೀಸ್‌ ಕುರಿಯನ್‌ 1921ರ ನವೆಂಬರ್‌ 26ರಂದು ಕೇರಳದ ಕೋಯಿಕ್ಕೋಡ್‌ನ‌ಲ್ಲಿ ಜನಿಸಿದರು.

    ಜಗತ್ತಿನಲ್ಲೇ ಭಾರತ ಅತ್ಯಂತ ಹೆಚ್ಚು ಹಾಲು ಉತ್ಪಾದಿಸುವ ದೇಶ ಎನ್ನುವ ಹೆಗ್ಗಳಿಕೆ ಪಡೆದುಕೊಳ್ಳಲು ಈ ಕೇರಳ ಮೂಲದ ಎಂಜಿನಿಯರ್‌ ಕೊಡುಗೆ ಗಣನೀಯ.

    ಭಾರತೀಯ ಕ್ಷೀರ ಅಭಿವೃದ್ಧಿ ಸಮಿತಿಯ ಸ್ಥಾಪಕ ಮತ್ತು ಮೊದಲ ಚೇರ್ಮನ್‌ ಆಗಿದ್ದ ಕುರಿಯನ್‌ ಕ್ಷೀರ ಕ್ರಾಂತಿಯ ಮೂಲಕ ಭಾರತದಲ್ಲಿ ಹೊಸದೊಂದು ಯುಗವನ್ನೇ ಸೃಷ್ಟಿಸಿದ ಪರಿ ರೋಚಕ.


1970ರ ಜನವರಿ 13ರಂದು ʼಆಪರೇಷನ್‌ ಫ್ಲಡ್‌’ ಹೆಸರಿನಲ್ಲಿ ಹಾಲು ಉತ್ಪಾದಕರ ಸಂಘದ ಅಭಿವೃದ್ಧಿ ಯೋಜನೆಗೆ ನಾಂದಿ ಹಾಡಲಾಯಿತು.

   ಇದು ಭಾರತದ ನ್ಯಾಷನಲ್‌ ಡೇರಿ ಡೆವಲಪ್‌ಮೆಂಟ್‌ ಬೋರ್ಡ್‌. (ಎನ್‌ಡಿಡಿಬಿ) ನ ಮಹತ್ವಾಂಕಾಕ್ಷಿ ಕಾರ್ಯಕ್ರಮವಾಗಿತ್ತು. ಇದು ಭಾರತದ ಇತಿಹಾಸವನ್ನೇ ಹೇಗೆ ಬದಲಾಯಿಸಿ ಬಿಟ್ಟಿತು ಎಂದರೆ ಹಾಲಿನ ಕೊರತೆಯಿರುವ ದೇಶ ಎನ್ನುವ ಪಟ್ಟಿಯಿಂದ ಅತೀ ದೊಡ್ಡ ಹಾಲು ಉತ್ಪಾದಿಸುವ ದೇಶ ಎನ್ನುವ ಮಟ್ಟಕ್ಕೆ ಭಾರತ ಬಂದು ತಲುಪಿತು. 

      ಸುಮಾರು ಮೂವತ್ತು ವರ್ಷಗಳಲ್ಲಿ ದೇಶದಲ್ಲಿ ಪ್ರತಿ ವ್ಯಕ್ತಿಗೆ ದೊರೆಯುತ್ತಿದ್ದ ಹಾಲಿನ ಪ್ರಮಾಣ ದುಪ್ಪಟ್ಟಾಗಿ ವೃದ್ಧಿಸಲು ಇದು ಕಾರಣವಾಯಿತು. ಜತೆಗೆ ಹೈನುಗಾರಿಕೆ ಭಾರತದ ಅತೀ ದೊಡ್ಡ ಸುಸ್ಥಿರ ಗ್ರಾಮೀಣ ಉದ್ಯೋಗ ಸೃಜಿಸುವ ಕ್ಷೇತ್ರವನ್ನಾಗಿಸಿತು. ದೇಶೀಯವಾಗಿ ಕ್ಷೀರೋತ್ಪಾದನೆಯ ಶೃಂಖಲೆ ರಚಿಸುವ ಉದ್ದೇಶದೊಂದಿಗೆ ಈ ಯೋಜನೆ ಆರಂಭಿಸಲಾಯಿತು. ಗ್ರಾಮೀಣ ಭಾಗದಲ್ಲಿ ಉತ್ಪಾದಿಸಲ್ಪಡುವ ಹಾಲನ್ನು ನಗರಗಳಿಗೆ ತಲುಪಿಸುವ ಮೂಲಕ ಹೈನುಗಾರರಿಗೆ ಉತ್ತಮ ಬೆಲೆ ದೊರೆಯುವಂತೆ ಮಾಡುವಲ್ಲಿ ಯೋಜನೆ ಯಶಸ್ಸು ಕಂಡಿತು. ಹೀಗೆ ನಡೆದ ಕ್ಷೀರ ಕ್ರಾಂತಿಗೆ ನೇತೃತ್ವ ನೀಡಿದವರೇ “ಭಾರತದ ಹಾಲು ವಿತರಕ’ ಎಂದೇ ಚಿರ ಪರಿಚಿತರಾದ ವರ್ಗೀಸ್‌ ಕುರಿಯನ್‌.


ಭಾರತದಲ್ಲಿ ಕ್ಷೀರ ಕ್ರಾಂತಿಗೆ ಕಾರಣವಾಗಿ ಇಂದು ದೇಶದ 8 ಕೋಟಿ ಕುಟುಂಬಗಳು ಹಾಲು ಉತ್ಪಾದನೆಯಲ್ಲಿ ತೊಡಗಿಸಿಕೊಳ್ಳಲು ಕಾರಣರಾದ ಇಬ್ಬರು ವ್ಯಕ್ತಿಗಳನ್ನು ಈ ದಿನ ನಮ್ಮ ದೇಶ ನೆನೆಯಬೇಕಿದೆ. ಅವರೆಂದರೆ, ಪ್ರಧಾನಿ ಲಾಲ್ ಬಹಾದ್ದೂರ್ ಶಾಸ್ತ್ರಿ ಹಾಗೂ ಕ್ಷೀರ ಪಿತಾಮಹ ವರ್ಗೀಸ್ ಕುರಿಯನ್.


ಅಮುಲ್ ಡೈರಿಯ ಯಶೋಗಾಥೆ ಕೇಳಿ ಆಶ್ಚರ್ಯಚಕಿತರಾಗಿದ್ದ ಶಾಸ್ತ್ರಿಯವರು ಪ್ರಧಾನಿಯಾಗಿದ್ದಾಗ 1964ರಲ್ಲಿ ಆನಂದ್ ಪ್ರದೇಶಕ್ಕೆ ಭೇಟಿ ನೀಡಿ ಒಂದು ರಾತ್ರಿ ಅಲ್ಲಿಯೇ ತಂಗಿದ್ದರು. ಅಂದು ರಾತ್ರಿ ಅಲ್ಲಿಯ ಗ್ರಾಮಸ್ಥರು ಕುರಿಯನ್ ರವರ ಬಗ್ಗೆ ಆಡಿದ ಮೆಚ್ಚುಗೆಯ ಮಾತುಗಳಿಂದ ಶಾಸ್ತ್ರಿಯವರು ಪ್ರೇರಿತರಾದರು.


ಬೆಳಿಗ್ಗೆ ಡೈರಿ ಭೇಟಿ ಮುಗಿಸಿ ಹೊರಡುವಾಗ ಶಾಸ್ತ್ರಿಯವರು ಕುರಿಯನ್ ರವರನ್ನು "ಒಬ್ಬ ಅಧಿಕಾರಿಯಾಗಿ ಇಷ್ಟೆಲ್ಲಾ ನಿಮಗೆ ಹೇಗೆ ಸಾಧ್ಯವಾಯಿತು? ಬೇರೆ ಕಡೆಗಳಲ್ಲಿ ಏಕೆ ಇದು ಸಾಧ್ಯವಾಗುತ್ತಿಲ್ಲ?" ಎಂದು ಕೇಳುತ್ತಾರೆ.


ಅದಕ್ಕೆ ಕುರಿಯನ್ ರವರು "ಇಲ್ಲಿ ನಾನು ರೈತರಿಗೆ ತಾಂತ್ರಿಕ ಸಹಾಯ ನೀಡಲು ಇರುವ ಅಧಿಕಾರಿ, ಆಕಸ್ಮಾತ್ ನಾನು ಕೆಲಸ ಮಾಡದಿದ್ದರೆ ಮುಲಾಜಿಲ್ಲದೆ ನನ್ನನ್ನೂ ಕಿತ್ತೊಗೆಯುತ್ತಾರೆ, ಹಾಗಾಗಿ ನನಗೆ ನನ್ನ ಕೆಲಸದ ಮೇಲೆ ಭಯವಿದೆ, ಶ್ರದ್ಧೆಯಿದೆ, ಆದರೆ ಇತರ ಕಡೆಗಳಲ್ಲಿ ಅಧಿಕಾರಿಗಳು ಹೇಳಿದಂತೆ ರೈತರು ಕೇಳಬೇಕಾದ ಪರಿಸ್ಥಿತಿಯಿದೆ, ಬಹುಶಃ ದೇಶದ ಬೇರೆ ಕಡೆಗಳಲ್ಲಿ ಇದು ಸಾಧ್ಯವಾಗದಿರುವುದಕ್ಕೆ ಇದೇ ಕಾರಣವಿರಬಹುದು" ಎನ್ನುತ್ತಾರೆ.


ಉತ್ತರ ಕೇಳಿ ಕುರಿಯನ್ ರವರ ಬಗ್ಗೆ ಇನ್ನಷ್ಟು ಆಸಕ್ತಿಯಿಂದ ಶಾಸ್ತ್ರಿಯವರು "ದೇಶಾದ್ಯಂತ ಕ್ಷೀರಕ್ರಾಂತಿ ತರಲು ಆ ಮೂಲಕ ಗ್ರಾಮೀಣ ಜನಜೀವನ ಹಸನುಗೊಳಿಸಲು ರಾಷ್ಟ್ರೀಯ ಡೈರಿ ಅಭಿವೃದ್ಶಿ ನಿಗಮ ಸ್ಥಾಪಿಸಲು ನಮ್ಮ ಸರ್ಕಾರ ಸಿದ್ದವಿದೆ, ಅಧ್ಯಕ್ಷರಾಗಿ ಕೆಲಸ ಮಾಡಲು ಸಿದ್ದರಿದ್ದೀರಾ?" ಎನ್ನುತ್ತಾರೆ.


ಆದಕ್ಕೆ ಕುರಿಯನ್ ರವರು "ಖಂಡಿತ ಮಾಡುತ್ತೇನೆ..ಆದರೆ, ನನ್ನ ಎರಡು ಬೇಡಿಕೆಗಳಿಗೆ ಒಪ್ಪಿದರೆ ಮಾತ್ರ" ಎನ್ನುತ್ತಾರೆ. "ಏನವು" ಎನ್ನುತ್ತಾರೆ ಶಾಸ್ತ್ರಿಯವರು.


ಕುರಿಯನ್ ಹೇಳುತ್ತಾರೆ,


"ಮೊದಲನೆಯದಾಗಿ, ಈ ನಿಗಮವು ಸರ್ಕಾರದ ಹಿಡಿತದಲ್ಲಿ ಇರಬಾರದು, ಸ್ವತಂತ್ರವಾಗಿರಬೇಕು..! ಎರಡನೆಯದಾಗಿ, ಈ ನಿಗಮದ ಕೇಂದ್ರ ಕಚೇರಿಯು ದೆಹಲಿಯಂತಹ ನಗರದಲ್ಲಿ ಇರಬಾರದು, ರೈತರ ನಡುವೆ, ಅಂದರೆ ಈ ಆನಂದ್ ನಂತಹ ಪ್ರದೇಶದಲ್ಲಿ ಇರಬೇಕು" ಎನ್ನುತ್ತಾರೆ.


ಶಾಸ್ತ್ರಿಯವರು ಎರಡನ್ನೂ ಒಪ್ಪುತ್ತಾರೆ, ಮುಂದೆ ಈ ಆನಂದ್ ಪ್ರದೇಶವು "ಭಾರತದ ಹಾಲಿನ ರಾಜಧಾನಿ" ಎನಿಸಿಕೊಳ್ಳುತ್ತದೆ. ದೇಶದಲ್ಲಿ ಹಾಲಿನ ಹೊಳೆ ಹರಿಯುತ್ತದೆ.


ಇಂದು ವಾರ್ಷಿಕ 18.5 ಕೋಟಿ ಟನ್ ನಷ್ಟು ಹಾಲು ಅಂದರೆ ಜಗತ್ತಿನ ಶೇ 22 ರಷ್ಟು ಹಾಲು ಭಾರತದಲ್ಲಿ ಉತ್ಪಾದನೆಯಾಗುತ್ತದೆ.


ದುರಂತವೆಂದರೆ ಇತ್ತೀಚಿನ ವರ್ಷಗಳಲ್ಲಿ ಹಾಲು ಡೈರಿಗಳಲ್ಲಿ ಹಲವು ಕಾರಣಗಳಿಂದ ಕುರಿಯನ್ ಹಾಗೂ ಶಾಸ್ತ್ರೀ ಜಿ ಯವರ ಮೂಲ ಉದ್ದೇಶವನ್ನೇ ಹಾಳು ಮಾಡಲಾಗುತ್ತಿದೆ. ಬಡ ರೈತರಿಗೆ ನಾನಾ ವಿಧದಲ್ಲಿ ಮೋಸ ಮಾಡಲಾಗುತ್ತಿದೆ.

    

No comments:

Post a Comment