ಮೌನವೇ~~
~~~ ಲೇಸು
**************************
ಒಬ್ಬ ವರ್ತಕ ವ್ಯಾಪಾರಕ್ಕೆಂದು ಕುದುರೆಯ ಮೇಲೆ ಹೊರಟಿದ್ದನು. ಮಾರ್ಗ ಮಧ್ಯದಲ್ಲಿ ದಣಿವಾರಿಸಿಕೊಳ್ಳಲು ಕುದುರೆಯನ್ನು ಒಂದು ಮರಕ್ಕೆ ಕಟ್ಟಿ ಹಾಕುತ್ತಾನೆ. ಅದೇ ಸಮಯಕ್ಕೆ ಅದೇ ದಾರಿಯಲ್ಲಿ ಬಂದ ಸೈನಿಕನೊಬ್ಬನು ತನ್ನ ಕುದುರೆಯನ್ನು ಸಹ ಅದೇ ಮರಕ್ಕೆ ಕಟ್ಟಿ ಹಾಕಲು ಬಯಸುತ್ತಾನೆ. ಆಗ ಆ ವರ್ತಕ ನಿನ್ನ ಕುದುರೆಯನ್ನು ಬೇರೆ ಕಡೆ ಕಟ್ಟಿರಿ .ಏಕೆಂದರೆ, ನನ್ನ ಕುದುರೆ ಸ್ವಲ್ಪ ಒರಟು ಸ್ವಭಾವದ್ದು. ಇನ್ನೊಂದು ಕುದುರೆ ಹತ್ತಿರ ಬಂದರೆ ಅದು ಸಹಿಸುವುದಿಲ್ಲ ಮತ್ತು ಅದು ನಿನ್ನ ಕುದುರೆಗೆ ಸುಮ್ಮನೆ ಒದೆಯ ಬಲ್ಲದು, ಮತ್ತು ಘಾಸಿ ಮಾಡಬಲ್ಲದು, ಸಾಯಿಸಲೂ ಬಹುದು ಎನ್ನುವನು. ಆದರೆ ಸೈನಿಕನಿಗೆ ಸ್ವಲ್ಪ ಅಹಂಕಾರ ಜಾಸ್ತಿ ಇತ್ತು. ವರ್ತಕನ ಮಾತಿಗೆ ಬೆಲೆ ಕೊಡದೆ ಏನು ಮಹಾ ಆಗಬಹುದೆಂದುಕೊಂಡು ಅದೇ ಮರಕ್ಕೆ ತನ್ನ ಕುದುರೆಯನ್ನು ಕಟ್ಟಿ ಹಾಕುತ್ತಾನೆ.
ಇವರಿಬ್ಬರೂ ತಮ್ಮ ತಮ್ಮ ಕೆಲಸಗಳಿಗೆ ಹೊರಟು ಹೋಗುತ್ತಾರೆ....
ನಂತರ ಇತ್ತ ಕುದುರೆಗಳ ನಡುವೆ ಜಗಳವಾಗುತ್ತದೆ ಮತ್ತು ವರ್ತಕನ ಕುದುರೆ ಸೈನಿಕನ ಕುದುರೆಯನ್ನು ಘಾಸಿಗೊಳಿಸುತ್ತದೆ. ಅದು ಕಾಲು ಮುರಿದುಕೊಂಡು ಕೆಳಗೆಬೀಳುತ್ತದೆ. ವರ್ತಕ ಮತ್ತು ಸೈನಿಕ ಇಬ್ಬರು ತಮ್ಮ ಕೆಲಸ ಮುಗಿಸಿ ಕೊಂಡು ಬರುತ್ತಾರೆ.ಆದರೆ ಅಲ್ಲಿ ಕಂಡಿದ್ದೇನು?-ಸೈನಿಕನ ಕುದುರೆ ಕಾಲು ಮುರಿದುಕೊಂಡು ಬಿದ್ದಿದೆ ಪಕ್ಕದಲ್ಲಿದ್ದ ವರ್ತಕನ ಕುದುರೆ ಹೇಷಾರವ ಮಾಡುತ್ತಿದೆ. ಇದನ್ನು ಕಂಡ ಸೈನಿಕನಿಗೆ ಕೋಪ ಉಕ್ಕಿ ಬರುತ್ತದೆ ಅವನು ವರ್ತಕನಿಗೆ- ನಿನ್ನ ಕುದುರೆ ನನ್ನ ಕುದುರೆಗೆ ಗಾಯ ಮಾಡಿ ಬೀಳಿಸಿದೆ ಅದರ ಕಾಲು ಮುರಿದಿದೆ. ಅದಕ್ಕೆ ಪರಿಹಾರ ಕಟ್ಟಿ ಕೊಡು ಎಂದು ವಾದಿಸುತ್ತಾನೆ. ಅದಕ್ಕೆ ವರ್ತಕ - ನಾನೇಕೆ ಕೊಡಲಿ? ನಾನು ಮೊದಲೇ ನನ್ನ ಕುದುರೆ ಸ್ವಭಾವದ ಬಗೆಗೆ ಹೇಳಿದ್ದೆ. ಆದರೆ ನೀನೇ ನನ್ನ ಮಾತನ್ನು ಕೇಳದೆ ನಿನ್ನ ಕುದುರೆಯನ್ನು ಅದೇ ಮರಕ್ಕೆ ಕಟ್ಟಿ ಹಾಕಿದೆ. ಇದರಲ್ಲೇ ನನ್ನ ತಪ್ಪೇನು ಇಲ್ಲ ಎನ್ನುವನು. ಹೀಗೆ ವಾದ- ವಿವಾದ ನಡೆದು ಅಲ್ಲಿನ ನ್ಯಾಯಾಧೀಶರಲ್ಲಿಗೆ ನ್ಯಾಯಕ್ಕಾಗಿ ಹೋಗುತ್ತಾರೆ. ಆಗ ನ್ಯಾಯಾಧೀಶ ಏನು ನಿಮ್ಮ ಸಮಸ್ಯೆ? ಎನ್ನಲು ಮೊದಲು ಸೈನಿಕ ಹೇಳುತ್ತಾನೆ.ವರ್ತಕನ ಕುದುರೆ ನನ್ನ ಕುದುರೆಯನ್ನು ಘಾಸಿಗೊಳಿಸಿದೆ, ಅದರ ಕಾಲನ್ನು ಮುರಿದಿದೆ. ಅದಕ್ಕೆ ಪರಿಹಾರ ಕೊಡು ಎಂದು ಆ ವರ್ತಕನನ್ನು ಕೇಳುತ್ತಿದ್ದೇನೆ, ಎಂದು ನಡೆದದನ್ನು ಹೇಳುತ್ತಾನೆ .ಆಗ ನ್ಯಾಯಾಧೀಶ ಕೇವಲ ನಿನ್ನ ಮಾತುಗಳನ್ನು ಕೇಳಿ ತೀರ್ಪು ನೀಡಲಾರೆ, ವರ್ತಕನೂ ಸಹ ನಡೆದುದನ್ನು ತಿಳಿಸಲಿ ಎಂದು ಕೇಳುತ್ತಾನೆ. ಆದರೆ ವರ್ತಕ ಮೌನವಹಿಸಿ ಉತ್ತರಿಸದೆ ಸುಮ್ಮನಿರುತ್ತಾನೆ. ಎಷ್ಟು ಸಲ ಕೇಳಿದರೂ ಆ ವರ್ತಕ ಉತ್ತರಿಸದೆ ಸುಮ್ಮನಿದ್ದಾಗ, ನ್ಯಾಯಾಧೀಶನು ಬಹುಶಃ ಈ ವರ್ತಕನಿಗೆ ಮಾತುಗಳು ಬರುತ್ತಿಲ್ಲವೆನಿಸುತ್ತದೆ, ಮೂಗನಿದ್ದಂತಿದೆ .ಆದ್ದರಿಂದ ಮಾತನಾಡುತ್ತಿಲ್ಲವೆಂದೆನಿಸುತ್ತಿದೆ, ಬರೀ ನಿನ್ನ ಮಾತುಗಳ ಆಧಾರದ ಮೇಲೆ ತೀರ್ಪು ನೀಡಲಾಗುವುದಿಲ್ಲ ಮತ್ತು ಆದ್ದರಿಂದ ಈ ಪ್ರಕರಣವನ್ನು ವಜಾ ಮಾಡುವುದಾಗಿಯೂ ತಿಳಿಸುತ್ತಾನೆ. ನ್ಯಾಯಾಧೀಶ ಹೀಗೆ ನುಡಿಯುತ್ತಿದ್ದಂತೆ ,ಸೈನಿಕ- ಸ್ವಾಮೀ ಅವರಿಗೆ ಮಾತು ಬರುತ್ತೆ , ಈಗ ನೋಡಿದರೆ ಮಾತು ಬರುವುದಿಲ್ಲ ಎನ್ನುವ ಹಾಗೆ ನಾಟಕ ಮಾಡುತ್ತಿರುವನು.ನಾನು ನನ್ನ ಕುದುರೆಯನ್ನು ಅವನ ಕುದುರೆಯ ಬಳಿ ಕಟ್ಟಲು ಹೋದಾಗ .....ಅವನು ಹೇಳಿದನು. ನಿನ್ನ ಕುದುರೆ ಇಲ್ಲಿ ಕಟ್ಟಬೇಡ ನನ್ನ ಕುದುರೆ ಬಹಳ ಒರಟು, ಒದೆಯುತ್ತೆ, ಗಾಯ ಮಾಡುತ್ತೆ ಬೇರೆ ಮರಕ್ಕೆ ಕಟ್ಟು ಎಂದೆಲ್ಲ ಹೇಳಿದನು. ಈಗ ನೋಡಿದರೆ ಮಾತು ಬರುವುದಿಲ್ಲ, ಮೂಕ ಎನ್ನುವ ತರಹ ನಾಟಕ ಮಾಡುತ್ತಿದ್ದಾನೆ ಎನ್ನುವನು. ಕೂಡಲೇ ನ್ಯಾಯಾಧೀಶ ನಕ್ಕು, ನೋಡು ಸತ್ಯವಾದ ವಿಷಯವನ್ನು ನೀನೆ ಒಪ್ಪಿಕೊಂಡಿರುವೆ.ವರ್ತಕನು ನಿನಗೆ ಮೊದಲೇ ನಿನ್ನ ಕುದುರೆಯನ್ನು ಅವನ ಕುದುರೆಯೊಂದಿಗೆ ಕಟ್ಟಬೇಡ ಎಂದು ಹೇಳಿದ್ದರೂ, ನೀನು ಉಪೇಕ್ಷಿಸಿ ನಿನ್ನ ಕುದುರೆಯನ್ನು ಅವನ ಕುದುರೆಯ ಪಕ್ಕದಲ್ಲಿ ಕಟ್ಟಿರುವಿ ತಪ್ಪು ನಿನ್ನದೇ ಆದರೆ ವರ್ತಕನ ಮೇಲೆ ವೃಥಾ ಆರೋಪ ಹೊರಿಸುತ್ತಿರುವೆ.
ಸ್ನೇಹಿತರೆ ಇಲ್ಲಿ ಆ ವರ್ತಕನ ಜಾಣ್ಮೆಯನ್ನು ಶ್ಲಾಘಿಸಬೇಕಾದದ್ದೇ.. ಕೆಲವು ಸಂದರ್ಭಗಳಲ್ಲಿ ಮೌನವಾಗಿ ಇದ್ದರೇನೇ ಅದು ಹೆಚ್ಚು ಅರ್ಥಪೂರ್ಣವಾಗಿರುತ್ತದೆ .ಹಾಗಾಗಿ ಯಾವಾಗ ಮಾತಾಡಬೇಕು? ಯಾವಾಗ ಮೌನವಾಗಿರಬೇಕು ?ಎನ್ನುವುದನ್ನು ನಾವು ಅರ್ಥ ಮಾಡಿಕೊಂಡರೆ ಒಳ್ಳೆಯದು....
No comments:
Post a Comment